6 ತಿಂಗಳಿನಿಂದ ನೀರು ಪೂರೈಕೆ ಪಂಪಿಗೆ ಅಕ್ರಮ ವಿದ್ಯುತ್ ಸಂಪರ್ಕ

ಸಾಂದರ್ಭಿಕ ಚಿತ್ರ

ಕಾರ್ಕಳ ಪುರಸಭೆಗೆ 17 ಲಕ್ಷ ರೂ ದಂಡ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಕಳೆದ ಒಂದು ವರ್ಷದಿಂದ ಇಲ್ಲಿನ ಪುರಸಭೆಯು ನಗರಕ್ಕೆ ನೀರು ಪೂರೈಸುವ ಪಂಪಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದ ಹಿನ್ನೆಲೆಯಲ್ಲಿ ಬೆಂಗಳೂರು ಮೆಸ್ಕಾಂ ಜಾಗ್ರತದಳ ದಾಳಿ ನಡೆಸಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದ ಪುರಸಭೆಯ ಆಡಳಿತದ ವಿರುದ್ಧ ಪ್ರಕರಣ ದಾಖಲಿಸಿ ಇದೀಗ ಬರೋಬ್ಬರಿ 17 ಲಕ್ಷ ರೂ ದಂಡ ವಿಧಿಸಿ ನೋಟಿಸ್ ಜಾರಿಗೊಳಿಸಿದೆ. ಈ ಪ್ರಕರಣದಿಂದ ಪುರಸಭೆ ಆಡಳಿತ ಭಾರೀ ಮುಖಭಂಗಕ್ಕೊಳಗಾಗಿದೆ.

ಮಾಹಿತಿ ಪ್ರಕಾರ ಕಳೆದ 6 ತಿಂಗಳಿನಿಂದ ಕಾರ್ಕಳ ಪುರಸಭೆಯು ರಾಮಸಮುದ್ರ ಕೆರೆಯಿಂದ ಕಾರ್ಕಳ ನಗರಕ್ಕೆ ನೀರು ಪೂರೈಸುವ ಸಲುವಾಗಿ 40 ಎಚ್ಪಿ ಸಾಮಥ್ರ್ಯದ ಪಂಪು ಅಳವಡಿಸಿತ್ತು. ಆದರೆ ಮೀಟರ್ ಅಳವಡಿದೇ ನೇರವಾಗಿ ಪಂಪಿಗೆ ಅಕ್ರಮ ವಿದ್ಯುತ್ ಸಂಪರ್ಕ ಕಲ್ಪಿಸಿರುವ ಹಿನ್ನೆಲೆಯಲ್ಲಿ ಮಾಹಿತಿ ಪಡೆದ ಮೆಸ್ಕಾಂ ಜಾಗ್ರತದಳವು ಕಳೆದ 10 ದಿನಗಳ ಹಿಂದೆ ಹಠಾತ್ ದಾಳಿ ನಡೆಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಪುರಸಭೆ ಆಡಳಿತದ ವಿರುದ್ಧ ಕೇಸು ದಾಖಲಿಸಿತ್ತು. ಇದೀಗ ಮೆಸ್ಕಾಂ ಇಲಾಖೆ ಪುರಸಭೆ ಈವರೆಗೆ ಬಳಸಿರುವ ವಿದ್ಯುತ್ ಶುಲ್ಕ ಹಾಗೂ ದಂಡ ಸೇರಿ ಸುಮಾರು 17 ಲಕ್ಷ ರೂ ಪಾವತಿಸುವಂತೆ ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಪುರಸಭೆ ಮೆಸ್ಕಾಂಗೆ ಭಾರೀ ಪ್ರಮಾಣದಲ್ಲಿ ದಂಡವನ್ನು ಪಾವತಿಸುವುದೇ ಎನ್ನುವುದು ಪ್ರಶ್ನೆಯಾಗಿದೆ.

ಬಳಿಕ ಮುಂದಿನ ಕ್ರಮ

“ನಗರಕ್ಕೆ ನೀರು ಪೂರೈಸುವ ನಿಟ್ಟಿನಲ್ಲಿ ಪಂಪಿಗೆ ಮೀಟರ್ ಇಲ್ಲದೇ ವಿದ್ಯುತ್ ಬಳಸಿರುವುದು ಮೇಲ್ನೋಟಕ್ಕೆ ಕಂಡಬಂದಿದ್ದು, ಈ ಕುರಿತು ಮೆಸ್ಕಾಂನಿಂದ ಈಗಾಗಲೇ ದಂಡ ಪಾವತಿಸುವಂತೆ ನೋಟಿಸ್ ಜಾರಿಯಾಗಿದೆ. ಆದರೆ ಸಾರ್ವಜನಿಕ ಉದ್ದೇಶಕ್ಕಾಗಿ ಕಣ್ತಪ್ಪಿನಿಂದ ಮೀಟರ್ ಇಲ್ಲದೇ ಪಂಪಿಗೆ ವಿದ್ಯುತ್ ಬಳಸಿರುವುದು ದೊಡ್ಡ ಅಪರಾಧವಲ್ಲ ಈ ಕುರಿತು ಕಾನೂನುತಜ್ಞರೊಂದಿಗೆ ಚರ್ಚಿಸಿದ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು” ಎಂದು ಕಾರ್ಕಳ ಪುರಸಭೆ ಮುಖ್ಯಾಧಿಕಾರಿ ಮೇಬಲ್ ಡಿಸೋಜಾ ಹೇಳಿದ್ದಾರೆ.

ಪುರಸಭೆ ನಿಧಿಯಿಂದ ಅವಕಾಶವಿಲ್ಲ

“ಪುರಸಭೆಯ ಆಡಳಿತದ ಮುಖ್ಯಸ್ಥರಾಗಿರುವ ಮುಖ್ಯಾಧಿಕಾರಿಯವರ ನೇತೃತ್ವದಲ್ಲಿ ಆಡಳಿತ ನಡೆಯುವುದರಿಂದ ಎಲ್ಲಾ ವಿಚಾರಗಳಿಗೂ ಮುಖ್ಯಾಧಿಕಾರಿಗಳೇ ಹೊಣೆಗಾರರಾಗಿರುತ್ತಾರೆ. ಅಕ್ರಮ ವಿದ್ಯುತ್ ಸಂಪರ್ಕದ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳಿಂದ ಅವರು ಮಾಹಿತಿ ಪಡೆದುಕೊಂಡು ಕ್ರಮ ಜರುಗಿಸಬೇಕಿತ್ತು. ಆದರೆ ಮುಖ್ಯಾಧಿಕಾರಿಗಳು ಕರ್ತವ್ಯಲೋಪವೆಸಗಿರುವ ಹಿನ್ನೆಲೆಯಲ್ಲಿ ಕಾನೂನಿನ ಪ್ರಕಾರ ಪುರಸಭೆ ನಿಧಿಯಿಂದ ದಂಡ ಪಾವತಿಸಲು ಅವಕಾಶವಿಲ್ಲ. ಇದಕ್ಕೆ ಮುಖ್ಯಾಧಿಕಾರಿಗಳು ಹಾಗೂ ಅಧ್ಯಕ್ಷರೇ ನೇರವಾಗಿ ಹೊಣೆಗಾರರಾಗಿರುತ್ತಾರೆ” ಎಂದು ಪ್ರಗತಿಪರ ನಾಗರಿಕ ವೇದಿಕೆಯ ಉಪಾಧ್ಯಕ್ಷ ಸಂಪತ್ ನಾಯಕ್ ಹೇಳಿದ್ದಾರೆ.