ಪೊದೆಗಳಿಂದ ಕೂಡಿರುವ ರೆಕಾರ್ಡ್ ರೂಂ ಕಟ್ಟಡ ಆವರಣ : ಕಾರ್ಕಳ ತಾಲೂಕು ಕಚೇರಿ ಅಭಿಲೇಖಾಲಯದ ದುರವಸ್ಥೆ

ಆವರಣದೊಳಗೆ ಬೆಳೆದು ನಿಂತಿರುವ ಪೊದೆಗಳು

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ತಾಲೂಕು ಕಚೇರಿಯಲ್ಲಿನ ಮಹತ್ವದ ದಾಖಲೆಗಳ ಸಂಗ್ರಹಣಾ ಕೊಠಡಿಯ ಸುತ್ತಮುತ್ತಲೂ ಪೊದೆಗಳಿಂದ ಕೂಡಿದ್ದು, ದಾಖಲೆಗಳ ಸಂಗ್ರಹಣಾ ಅಭಿಲೇಖಾಯ ಕಚೇರಿ ಪಾಳುಬಿದ್ದ ಬಂಗಲೆಯಂತಾಗಿದೆ. ಈ ಹಿಂದೆ ಬಂಧೀಖಾನೆಯಾಗಿದ್ದ ಕಟ್ಟಡದಲ್ಲಿ ಪ್ರಸ್ತುತ ರೆಕಾರ್ಡ್ ರೂಂ ಕಾರ್ಯಾಚರಿಸುತ್ತಿದ್ದು, ಶಿಥಿಲಾವಸ್ಥೆಯ ಕಟ್ಟದಲ್ಲಿಯೇ ಮಹತ್ವದ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಚೌಕಾಕಾರದ ಈ ಕಟ್ಟಡದ ಆವರಣದೊಳಗಿನ ಖಾಲಿ ಜಾಗದಲ್ಲಿ ಪೊದೆಗಳು ಬೆಳೆದಿದ್ದರೂ ತಾಲೂಕು ಆಡಳಿತ ಇದನ್ನು ಸ್ವಚ್ಛಗೊಳಿಸುವ ಗೋಜಿಗೂ ಹೋಗದಿರುವುದು ದುರಂತ ಎಂದು ನಾಗರಿಕರು ಆರೋಪಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಅಂದಿನ ಡೀಸಿಯಾಗಿದ್ದ ಮುದ್ದುಮೋಹನ್ ಅಭಿಲೇಖಾಲಯ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದಾಗ ದಾಖಲೆಗಳನ್ನು ಕಟ್ಟಡದ ಒಳಗೆ ಎಲ್ಲೆಂದರಲ್ಲಿ ರಾಶಿ ಹಾಕಲಾಗಿತ್ತು ಹಾಗೂ ಕಟ್ಟಡದ ಆವರಣದೊಳಗೆ ಬೆಳೆದಿದ್ದ ಪೊದೆಗಳನ್ನು ಕಂಡು ಈ ಕುರಿತು ಅಂದಿನ ತಹಶೀಲ್ದಾರರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಬಳಿಕ ತಾಲೂಕು ಆಡಳಿತ ಕಚೇರಿಯ ಆವರಣವನ್ನು ಸ್ವಚ್ಛಗೊಳಿಸಿ ದಾಖಲೆಗಳ ಗಣಕೀಕರಣದ ಬಳಿಕ ಮತ್ತೆ ಮೂಲದಾಖಲೆಗಳನ್ನು ವ್ಯವಸ್ಥಿತವಾಗಿ ಜೋಡಿಸಲಾಗಿತ್ತು.

ಸುಮಾರು 150 ವರ್ಷಗಳಿಗೂ ಹಿಂದಿನ ಮಹತ್ವದ ದಾಖಲೆಗಳು ಈ ಕಟ್ಟದಲ್ಲಿನ ಅಭಿಲೇಖಾಲಯದಲ್ಲಿರುವುದರಿಂದ ಇಲ್ಲಿನ ದಾಖಲೆಗಳ ಸಂರಕ್ಷಣೆ ಹಾಗೂ ಕಚೇರಿಯ ಪರಿಸರವನ್ನು ಸ್ವಚ್ಛಗೊಳಿಸುವುದು ತಾಲೂಕು ಕಚೇರಿಯ ಹೊಣೆಗಾರಿಕೆಯಾಗಿದೆ. ಅತ್ಯಂತ ಹಳೆಯ ಕಟ್ಟಡದಲ್ಲಿ ಎಲ್ಲಾ ಮೂಲದಾಖಲೆಗಳನ್ನು ಸಂಗ್ರಹಿಸಿರುವ ಹಿನ್ನೆಲೆಯಲ್ಲಿ ಈ ದಾಖಲೆಗಳಿಗೆ ಭದ್ರತೆಯೂ ಬೇಕಾಗಿದೆ, ಹೀಗಾಗಿ ಈ ಕಟ್ಟಡವನ್ನು ದುರಸ್ತಿಗೊಳಿಸಿ ಪ್ರತೀವರ್ಷ ಕಟ್ಟಡದ ಆವರಣದೊಳಗಿನ ಖಾಲಿ ಜಾಗವನ್ನು ಸ್ವಚ್ಛಗೊಳಿಸುವ ಬದಲು ಈ ಜಾಗದಲ್ಲಿ ಇಂಟರಲಾಕ್ ಅಳವಡಿಸಿ ಈ ಕಚೇರಿಯನ್ನು ವ್ಯವಸ್ಥಿತವಾಗಿಡಬಹುದಾಗಿದೆ ಎಂಬ ಸಲಹೆ ವ್ಯಕ್ತವಾಗಿದೆ.