ಕಾರ್ಕಳ ಪಡಿತರದಾರರಿಗೆ ಸೀಮೆ ಎಣ್ಣೆ ಖೋತಾ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಕಾರ್ಕಳ ಪುರಸಭಾ ವ್ಯಾಪ್ತಿಯ ಪಡಿತರದಾರರಿಗೆ ನವೆಂಬರ್ ತಿಂಗಳಿನಿಂದ ಸೀಮೆಎಣ್ಣೆ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು ಮಾಸಿಕ ಖೋಟಾದಡಿ ನೀಡಬೇಕಿದ್ದ 2158 ಲೀಟರ್ ಸೀಮೆಎಣ್ಣೆಯ ಬೇಡಿಕೆಯಲ್ಲಿ ಒಂದೇ ಒಂದು ಲೀಟರ್ ಪೂರೈಕೆಯಾಗದೇ ಬಡವರು ಬವಣೆಪಡುವಂತಾಗಿದೆ.

ಕಾರ್ಕಳ ಪುರಸಭಾ ವ್ಯಾಪ್ತಿಯ 5 ನ್ಯಾಯಬೆಲೆ ಅಂಗಡಿಗಳಲ್ಲಿ ನವೆಂಬರ್ ತಿಂಗಳಿನ ಖೋಟಾದಡಿ ಸೀಮೆಎಣ್ಣೆ ಪೂರೈಕೆಯಾಗದೇ ಅಡುಗೆ ತಯಾರಿಸಲು ಸೀಮೆಎಣ್ಣೆಯನ್ನೇ ಇಂಧನವಾಗಿ ಬಳಸುತ್ತಿದ್ದ ಜನರು ಪರದಾಡುತ್ತಿದ್ದಾರೆ.

ಕಾರ್ಕಳ ಪುರಸಭೆ ವ್ಯಾಪ್ತಿಯ ಬಹುತೇಕ ವಾರ್ಡ್‍ಗಳು ಗ್ರಾಮೀಣ ಪ್ರದೇಶವಾಗಿದ್ದು, ವಿದ್ಯುತ್ ಕಡಿತದ ಹಿನ್ನಲೆಯಲ್ಲಿ ಕನಿಷ್ಠ ಬೆಳಕಿನ ವ್ಯವಸ್ಥೆಗಾದರೂ ಸೀಮೆಎಣ್ಣೆ ಪೂರೈಕೆಯಾಗಿಲ್ಲ.

ಕಾರ್ಕಳ ತಾಲೂಕಿನಾದ್ಯಂತ ಒಟ್ಟು 58 ನ್ಯಾಯ ಬೆಲೆ ಅಂಗಡಿಗಳಿದ್ದು ಅವುಗಳ ಪೈಕಿ ಪುರಸಭೆ ವ್ಯಾಪ್ತಿಯಲ್ಲಿ 5 ನ್ಯಾಯಬೆಲೆ ಅಂಗಡಿಗಳಿವೆ. ಪುರಸಭಾ ವ್ಯಾಪ್ತಿಗೆ 2158 ಲೀ ಸೀಮೆಎಣ್ಣೆ ಬೇಡಿಕೆಯಿದ್ದರೆ, ಗ್ರಾಮಾಂತರ ಪ್ರದೇಶದಲ್ಲಿ ಮಾಸಿಕ 55897 ಲೀಟರ್ ಸೀಮೆಎಣ್ಣೆ ಬೇಡಿಕೆಯಿದ್ದು ನವೆಂಬರ್‍ನಲ್ಲಿ ನಿಗದಿತ ಖೋಟಾಗಿಂತ 18692 ಲೀಟರ್ ಸೀಮೆಎಣ್ಣೆ ಖೋತಾ ಆಗಿರುವ ಹಿನ್ನೆಲೆಯಲ್ಲಿ ಗ್ರಾಮಾಂತರ ಬಡ ಫಲಾನುಭವಿಗಳಿಗೂ ಸಾಕಷ್ಟು ತೊಂದರೆಯಾಗಿದೆ.

ಸೀಮೆಎಣ್ಣೆ ನಂಬಿ ಅಡುಗೆ ಮಾಡುವವರು ಇದ್ದಲ್ಲಿ ಅಂತಹವರು ಅಡುಗೆ ಅನಿಲ ಸಂಪರ್ಕ ಕೋರಿ ಕೊಡಲೇ ಅರ್ಜಿ ಸಲ್ಲಿಸಿದ್ದಲ್ಲಿ ಅಂತಹವರಿಗೆ ಶೀಘ್ರವೇ ಅಡುಗೆ ಅನಿಲದ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ಕಾರ್ಕಳ ತಹಶೀಲ್ದಾರ್ ಟಿ ಜಿ ಗುರುಪ್ರಸಾದ್ ಹೇಳಿದ್ದಾರೆ.