ಹೂತಿದ್ದ ಶವ ಹೊರತೆಗೆದ ಕಾರ್ಕಳ ಪೊಲೀಸ್

ಕೊಲೆಯಾದವ ದಾವಣಗೆರೆಯಿಂದ ನಾಪತ್ತೆಯಾಗಿದ್ದ

ನಮ್ಮ ಪ್ರತಿನಿಧಿ ವರದಿ
ಕಾರ್ಕಳ : ಪಳ್ಳಿ ಗ್ರಾ ಪಂ ವ್ಯಾಪ್ತಿಯ ನಿಂಜೂರಿನಲ್ಲಿ ಶುಕ್ರವಾರ ಸಿಕ್ಕ ಅಪರಿಚಿತ ಶವದ ಗುರುತು ಪತ್ತೆಯಾಗಿದ್ದು, ವ್ಯಕ್ತಿಯ ಪತ್ನಿ ವಾಹಿದಾ ಶೇಖ್ ತನ್ನ ಗಂಡನ ಗುರುತು ಪತ್ತೆ ಹಚ್ಚಿರುವ ಆಧಾರದಲ್ಲಿ ಈ ವ್ಯಕ್ತಿ ದಾವಣಗೆರೆಯ ನಿವಾಸಿ ಮನ್ಸೂರ್ ಆಲಿ (48) ಎಂದು ತಿಳಿದುಬಂದಿದೆ. ಈ ಪ್ರಕರಣದ ಕುರಿತಂತೆ ಆರಂಭದಲ್ಲಿ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದು, ಇದೀಗ ಈ ವ್ಯಕ್ತಿಯನ್ನು ಕೊಲೆಗೈದು ಶವವನ್ನು ಹೂತಿಟ್ಟಿದ್ದಾರೆ ಎನ್ನುವ ವಿಚಾರ ಪೊಲೀಸರ ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ನಿಂಜೂರು ಮೂಡುಮನೆಯ ಪ್ರಶಾಂತ್ ಬಲ್ಲಾಳ್ ಎಂಬಾತನನ್ನು ಕಾರ್ಕಳ ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ದಾವಣಗೆರೆಯಲ್ಲಿ ಆರ್ ಟಿ ಒ ಬ್ರೋಕರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮನ್ಸೂರ್ ಆಲಿಯನ್ನು ಆತನ ಸ್ನೇಹಿತ ಫಯಾಜ್ ಎಂಬಾತ ನಿಂಜೂರಿನ ಪ್ರಶಾಂತ್ ಬಲ್ಲಾಳ್ ಎಂಬವರ ಮನೆಗೆ ಕರೆತಂದಿದ್ದ ಎನ್ನಲಾಗಿದ್ದು, ಬೆಂಗಳೂರು ಹಾಗೂ ಮೈಸೂರಿನ ಇನ್ನಿಬ್ಬರು ಸೇರಿ ಒಟ್ಟು ನಾಲ್ವರು ಕೊಲೆಗೈದಿರಬಹುದೆಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದು, ಇನ್ನುಳಿದ ಆರೋಪಿಗಳ ಪತ್ತೆಗಾಗಿ ತೀವ್ರ ಶೋಧ ಮುಂದುವರೆಸಿದ್ದಾರೆ.
ನಿಂಜೂರು ಗ್ರಾಮದ ಮೂಡುಮನೆಗೆ ಸೇರಿದ ಜಮೀನಿನಲ್ಲಿ ಅರ್ಧಂಬರ್ಧ ಹೂತು ಹಾಕಿದ ಶವವು ಡಿ 16ರಂದು ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಸಂತೋಷ್ ಎಂಬವರು ಪೊಲೀಸರಿಗೆ ಮಾಹಿತಿ ನೀಡಿದ ಆಧಾರದಲ್ಲಿ ಸ್ಥಳಕ್ಕಾಗಮಿಸಿದ್ದ ನಗರ ಠಾಣೆಯ ಪೊಲೀಸರು ತಹಶೀಲ್ದಾರ್ ಸಮ್ಮುಖದಲ್ಲಿ ಶನಿವಾರ ಶವವನ್ನು ಮೇಲಕ್ಕೆತ್ತಿದ್ದರು. ಬಳಿಕ ಈ ಕುರಿತು ತನಿಖೆ ಕೈಗೆತ್ತಿಕೊಂಡು ಮಾಹಿತಿ ಕಲೆ ಹಾಕಿದಾಗ ದಾವಣಗೆರೆಯಲ್ಲಿ ಮನ್ಸೂರ್ ಆಲಿ ಎಂಬವರು ಕಳೆದ ಒಂದೂವರೆ ತಿಂಗಳ ಹಿಂದೆ ನಾಪತ್ತೆಯಾಗಿರುವ ಕುರಿತು ಅಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಕಾರ್ಕಳ ಪೊಲೀಸರು ಆತನ ಕುಟುಂಬದಬವರನ್ನು ಕರೆಯಿಸಿ ಶವದ ಗುರುತು ಪತ್ತೆ ಹಚ್ಚಿದ್ದಾರೆ. ಆದರೆ ಮನ್ಸೂರ್ ಆಲಿ ಕೊಲೆಗೆ ಕಾರಣವೇನೆಂದು ಇನ್ನೂ ನಿಗೂಢವಾಗಿದೆ.
ಮನ್ಸೂರ್ ಆಲಿಯನ್ನು ಕರೆತಂದಿದ್ದಾನೆ ಎನ್ನಲಾದ ಫಯಾಜ್ ಯಾರು ಎನ್ನುವುದು ಮನ್ಸೂರ್ ಕುಟುಂಬದವರಿಗೆ ವಿಚಾರ ತಿಳಿಯದ ಹಿನ್ನೆಲೆಯಲ್ಲಿ ಪೊಲೀಸರು ಈ ಪ್ರಕರಣ ಬೇಧಿಸುವುದು ಸವಾಲಿನ ವಿಷಯವಾಗಿದೆ. ಮೂಲಗಳ ಪ್ರಕಾರ ಹಣಕಾಸಿನ ವಿಚಾರದಲ್ಲಿ ಮನ್ಸೂರನನ್ನು ಇಲ್ಲಿಗೆ ಕರೆಯಿಸಿ ಬಳಿಕ ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದ್ದು, ಈ ಪ್ರಕರಣ ಸಾಕಷ್ಟು ಜಟಿಲತೆಯಿಂದ ಕೂಡಿದ್ದು, ತನಿಖೆಯ ದೃಷ್ಟಿಯಿಂದ ಈ ಪ್ರಕರಣದ ಕುರಿತು ಪೊಲೀಸರು ಯಾವುದೇ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.