ಕಲೆಯ ಉಳಿವು, ಜನರಿಗೆ ಮನರಂಜನೆ ಕಲಾನಿಕೇತನ ಸಂಸ್ಥೆಯ ಮುಖ್ಯ ಉದ್ದೇಶ

ಸಾಂದರ್ಭಿಕ ಚಿತ್ರ

ಮಾಸ್ಕೇರಿ ಎಂ ಕೆ ನಾಯ್ಕ

ನಮ್ಮ ಪ್ರತಿನಿಧಿ ವರದಿ

ಕಾರವಾರ : “ಕಲೆಯ ಉಳಿವು ಮತ್ತು ಜನರಿಗೆ ಮನರಂಜನೆ ಮಾತ್ರ ಬೆಂಗಳೂರಿನ ತಾಂಡವ ಕಲಾನಿಕೇತನ ಸಂಸ್ಥೆಯ ಮುಖ್ಯ ಉದ್ದೇಶವಾಗಿದ್ದು, 5 ದಿನಗಳವರೆಗೆ ನಡೆಯುವ ಈ ಉತ್ಸವದಲ್ಲಿ ಜನರ ಭಾಗವಹಿಸುವಿಕೆ ಅತ್ಯಂತ ಮಹತ್ವದ್ದಾಗಿದೆ” ಎಂದು ನಾಡಿನ ಪ್ರಸಿದ್ಧ ಸಾಹಿತಿ ಮಾಸ್ಕೇರಿ ಎಂ ಕೆ ನಾಯ್ಕ ಹೇಳಿದರು.

ಇಲ್ಲಿನ ರವಿಂದ್ರನಾಥ್ ಟ್ಯಾಗೋರ್ ಕಡಲತೀರದ ಮಯೂರವರ್ಮ ವೇದಿಕೆಯಲ್ಲಿ ಬುಧವಾರ ಕರಾವಳಿ ಹಬ್ಬಕ್ಕೆ ಅವರು ಚಾಲನೆ ನೀಡಿ ಮಾತನಾಡುತ್ತಿದ್ದರು. “ಜಿಲ್ಲೆಯ ಸಾಂಪ್ರದಾಯಿಕ ಕಲಾಪ್ರಕಾರಗಳನ್ನು ರಕ್ಷಿಸುವ ಉದ್ದೇಶದಿಂದ ಆಚರಿಸಲಾಗುವ ಕರಾವಳಿ ಹಬ್ಬದ ಯಶಸ್ಸಿಗೆ ತಾಂಡವ ಕಲಾನಿಕೇತನ ಬಹಳ ಶ್ರಮಿಸುತ್ತಿದೆ. ಲಾಭ-ನಷ್ಟದ ಉದ್ದೇಶ ಇಲ್ಲದೇ, ಸರಕಾರದ ಹಣಕಾಸಿನ ನೆರವು ಇಲ್ಲದೇ ಸಂಸ್ಥೆಯು ಸ್ವಯಂ ಲಕ್ಷಾಂತರ ಹಣವನ್ನು ಖರ್ಚು ಮಾಡಿ ಕರಾವಳಿ ಹಬ್ಬ ಆಚರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ” ಎಂದರು.

ಅಧ್ಯಕ್ಷತೆ ವಹಿಸಿದ್ದ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ್ ನಾಯಕ ಮಾತನಾಡಿ, “ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಜನರು ಹೋರಾಟ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು” ಎಂದರು.

ತಾಂಡವ ಕಲಾನಿಕೇತನದ ಸಂಸ್ಥಾಪಕ ಅಧ್ಯಕ್ಷ ಮಂಜುನಾಥ್ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಪೆÇೀಷಕಿ ರೇಖಾ ಕೊಲ್ಲೂರು, ಡಾ ಪ್ರಕಾಶ್ ನಾಯ್ಕ, ವಸಂತ್ ಬಾಂದೇಕರ, ವಿಜಯೇಂದ್ರ ಕುಮಾರೇಶ, ಪೂನಂ ಪ್ರಸಾದ್ ಮತ್ತಿತರರಿದ್ದರು. ಸಭಾ ಕಾರ್ಯಕ್ರಮದ ಬಳಿಕ ನಡೆದ ಬಾಲಿವುಡ್ ಗಾಯಕ ಮುಂಬೈನ ಚೇತನ್ ಖಾಜಿ ಹಾಗೂ ಮಂಗಳೂರಿನ ರಾಜೇಶ ಮತ್ತು ತಂಡದ ರಸಮಂಜರಿ ಪ್ರೇಕ್ಷಕರನ್ನು ರಂಜಿಸಿತು. ಚೇತನ್ ಖಾಜಿ ಆಶಿಕಿ-2, ರಹೀಜ್ ಮುಂತಾದ ಹಿಂದಿಯ ಸುಮಧುರ ಚಿತ್ರಗೀತೆಗಳನ್ನು ಹಾಡುವ ಮೂಲಕ ಸಂಗೀತ ಸುಧೆ ಹರಿಸಿದರು. ಮಂಗಳೂರಿನ ರಾಜೇಶ್ ಮತ್ತು ತಂಡದವರು ಕನ್ನಡ ಮತ್ತು ಹಿಂದಿಯ ಹೊಸ ಚಿತ್ರಗೀತೆಗಳನ್ನು ಹಾಡಿದ್ದಲ್ಲದೇ, ತಂಡದ ಗುಂಪು ನೃತ್ಯ ಮನಸೂರೆಗೊಂಡಿತು.