ಮೆಸ್ಕಾಂ ನೌಕರನ ಲಂಚಾವತಾರದ ಸುದ್ದಿ ಇದ್ದ `ಕರಾವಳಿ ಅಲೆ’ ಬಂಡಲ್ ಹೈಜಾಕ್

ಕಾರ್ಕಳ : ಮೆಸ್ಕಾಂನಿಂದ ನಿವೃತ್ತರಾದ ಹಿರಿಯ ನೌಕರರೊಬ್ಬರ ಉಪದಾನ ಮೊತ್ತವನ್ನು ಬಿಡುಗಡೆಗೊಳಿಸಲು ಉಡುಪಿಯ ಮೆಸ್ಕಾಂ ನೌಕರ ಲಂಚಕ್ಕೆ ಬೇಡಕೆಯಿಟ್ಟ ಸುದ್ದಿ `ಕರಾವಳಿ ಅಲೆ’ಯ ಬುಧವಾರದ ಸಂಚಿಕೆಯಲ್ಲಿ ಪ್ರಕಟವಾಗುತ್ತಿದ್ದಂತೆಯೇ ಆತನ ಸಬಂಧಿಕರರಾದ ಕಾರ್ಕಳ ಪುರಸಭಾ ಸದಸ್ಯನೋರ್ವನ `ಕೈ’ವಾಡದಿಂದ ಕಾರ್ಕಳದ ಕರಾವಳಿ ಅಲೆ ಬಂಡಲುಗಳನ್ನೇ ಎಗರಿಸಿ ಹೇಡಿತನದ ಕೆಲಸ ಮಾಡಿರುವ ಘಟನೆ ಬುಧವಾರದಂದು ನಡೆದಿದೆ.

ಉಡುಪಿ ಮೆಸ್ಕಾಂ ಕಚೇರಿಯ ಸಹಾಯಕ ಲೆಕ್ಕಾಧಿಕಾರಿ ಗಿರೀಶ್ ಹಾಗೂ ಸತೀಶ್ ಎಂಬವರು ಮೆಸ್ಕಾಂನಿಂದ ನಿವೃತ್ತರಾಗಲಿದ್ದ ಸಿನೀಯರ್ ಮೆಕ್ಯಾನಿಕ್ ಮಹಮ್ಮದ್ ಅವರ ಉಪದಾನ ಮೊತ್ತದ ಬಿಡುಗಡೆಗೆ 60 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟದ್ದರು ಎಂದು ಆರೋಪಿಸಲಾಗಿತ್ತು. ಬಳಿಕ ಈ ಪ್ರಕರಣಕ್ಕೆ ಕುರಿತಂತೆ ಸತೀಶ್ ಎಂಬವರನ್ನು ಅಮಾನತುಗೊಳಿಸಲಾಗಿತ್ತು

ಆದರೆ ಗಿರೀಶ್ ಅವರ ವಿರುದ್ಧ ಕ್ರಮ ಜರುಗಿಸದ ಅಧಿಕಾರಿಗಳ ವಿರುದ್ಧ ಮಹಮ್ಮದ್ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದ್ದರು. ಈ ಪ್ರಕರಣದ ಕುರಿತಂತೆ `ಕರಾವಳಿ ಅಲೆ’ ಡಿ 7ರ ಬುಧವಾರದ ಸಂಚಿಕೆಯಲ್ಲಿ ಲಂಚಾವತಾರದ ಕುರಿತು ಸಮಗ್ರ ವರದಿ ಪ್ರಕಟಿಸಿತ್ತು.

ಪತ್ರಿಕೆಯಲ್ಲಿ ಸುದ್ದಿ ಪ್ರಕಟಗೊಂಡ ಬೆನ್ನಲ್ಲೇ ಗಿರೀಶನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಕರಾವಳಿ ಅಲೆಯಲ್ಲಿ ತನ್ನ ಕುರಿತ ಸುದ್ದಿ ಪ್ರಕಟವಾಗಿರುವುದು ಗೊತ್ತಾದ ಕೂಡಲೇ ತನ್ನ ಕಾರ್ಕಳದ ಸಂಬಂಧಿಕ ಹಾಗೂ ಪುರಸಭೆಯ ಸದಸ್ಯನೊಬ್ಬನಿಗೆ ಕರೆ ಮಾಡಿ ಕಾರ್ಕಳಕ್ಕೆ ರವಾನೆಯಾಗಿದ್ದ ಐದು ಸಾವಿರಕ್ಕೂ ಮಿಕ್ಕಿದ ಪತ್ರಿಕೆಗಳ ಬಂಡಲುಗಳನ್ನು ಖರೀದಿಸಿದ್ದಾನೆ ಎನ್ನಲಾಗಿದೆ.

ವರದಿ ಪ್ರಕಟಿಸಿ  ತನಗೆ ನ್ಯಾಯ ಒದಗಿಸಿದ ಕರಾವಳಿ ಅಲೆ ಪತ್ರಿಕೆ ಹಾಗೂ ಮೆಸ್ಕಾಂ ಅಧಿಕಾರಿಗಳಿಗೆ ನಿವೃತ್ತ ಉದ್ಯೋಗಿ ಮಹಮ್ಮದ್ ಕೃತಜ್ಞತೆ ಸಲ್ಲಿಸಿದ್ದಾರೆ.