ಕನ್ಯಾನ, ಕರೋಪಾಡಿಯಲ್ಲಿ ಸಮಾಜಘಾತುಕರ ಅಟ್ಟಹಾಸ

ಸಾಂದರ್ಭಿಕ ಚಿತ್ರ

ಹೊರಠಾಣೆ ತೆರೆಯಲು ನಾಗರಿಕರ ಆಗ್ರಹ 

ವಿಟ್ಲ : ಸಮಾಜಘಾತುಕರ ಅಟ್ಟಹಾಸದಿಂದ ಕುಖ್ಯಾತಿ ಪಡೆದಿರುವ ಅಂತಾರಾಜ್ಯ ಗಡಿಭಾಗದ ಕನ್ಯಾನ, ಕರೋಪಾಡಿಯ ನಾಗರಿಕರಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದ್ದು ಇನ್ನೊಂದು ತಲೆ ಉರುಳುವ ಮುನ್ನವಾದರೂ ಪೊಲೀಸ್ ಹೊರಠಾಣೆ ತೆರೆಯಬೇಕಾಗಿದೆ.

ವಿಟ್ಲ ಠಾಣಾ ವ್ಯಾಪ್ತಿಯ ಶಾಂತಿಯುತ ಗ್ರಾಮಗಳೆಂಬ ಪ್ರಖ್ಯಾತಿ ಪಡೆದಿದ್ದ ಕನ್ಯಾನ ಮತ್ತು ಕರೋಪಾಡಿ ಗ್ರಾಮ ಕಳೆದ ಐದಾರು ವರ್ಷಗಳಿಂದ ಕುಖ್ಯಾತಿ ಪಡೆದಿವೆÉ. ಹಾಡಹಗಲಲ್ಲೇ ಕೊಲೆ, ಕೊಲೆ ಯತ್ನ, ಹಲ್ಲೆ, ಅಪಹರಣ, ಅತ್ಯಾಚಾರಗಳಲ್ಲದೇ ಮರಳು, ಟಿಂಬರ್ ಮತ್ತು ಗಾಂಜಾ ಮಾಫಿಯಾದ ಜೊತೆಗೆ ಮಟ್ಕಾ ದಂಧೆ, ಮೀಟರ್ ಬಡ್ಡಿ ಮಾಫಿಯಾ ಕೂಡಾ ಕನ್ಯಾನ, ಕರೋಪಾಡಿ ಗ್ರಾಮದಲ್ಲಿ ಮಾಮೂಲಾಗಿದೆ. ಕೇರಳ ಮತ್ತು ಕರ್ನಾಟಕದ ಗಡಿಭಾಗದಲ್ಲಿರುವ ಎರಡೂ ಗ್ರಾಮಗಳು ಸಮಾಜಘಾತುಕರ ಅಟ್ಟಹಾಸದಿಂದ ತತ್ತರಿಸಿವೆ. ಕನ್ಯಾನ, ಕರೋಪಾಡಿಯಲ್ಲಿ ದುರ್ಘಟನೆಗಳು ನಡೆದರೆ 14 ಕಿಲೋ ಮೀಟರ್ ದೂರದಲ್ಲಿರುವ ವಿಟ್ಲದಿಂದ ಪೊಲೀಸರು ಹೋಗುವಷ್ಟರಲ್ಲಿ ದುಷ್ಕರ್ಮಿಗಳು ಗಡಿದಾಟಿ ಸೇಫಾಗುತ್ತಾರೆ.

ರಾಜಕೀಯ ಪಕ್ಷಗಳಲ್ಲಿ ಹುಟ್ಟಿಕೊಂಡ ಗುಂಪುಗಾರಿಕೆ, ಮಾಫಿಯಾ ಗುಂಪುಗಳ ನಡುವಿನ ಧ್ವೇಷ, ಧರ್ಮದ ಮದ ತಲೆಗೇರಿದ ಮತಾಂಧರ ಗುಂಪುಗಳು ಮುಯ್ಯಿಗೆ ಮುಯ್ಯಿ ತೀರಿಸಲು ಕನ್ಯಾನ ಮತ್ತು ಕರೋಪಾಡಿಯನ್ನು ವೇದಿಕೆ ಮಾಡಿಕೊಂಡಿವೆ. ಸಾಕಷ್ಟು ವಿದ್ಯಾಸಂಸ್ಥೆಗಳು ಮತ್ತು ಧಾರ್ಮಿಕ ಕೇಂದ್ರಗಳನ್ನು ಹೊಂದಿರುವ ಕನ್ಯಾನ, ಕರೋಪಾಡಿ ಜನರಲ್ಲಿ ಇದೀಗ ಪರಸ್ಪರ ವಿಶ್ವಾಸ, ನಂಬಿಕೆ ಎಂಬುದು ಕಡಿಮೆಯಾಗುತ್ತಿದೆ. ಕನ್ಯಾನದಲ್ಲಿ ಪೊಲೀಸ್ ಹೊರಠಾಣೆ ತೆರೆಯಬೇಕೆಂದು ಕನ್ಯಾನ ಮತ್ತು ಕರೋಪಾಡಿ ಗ್ರಾಮ ಪಂಚಾಯತ 2 ವರ್ಷಗಳ ಹಿಂದೆಯೇ ಸಚಿವರಿಗೆ ಮತ್ತು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿತ್ತು. ಆದರೆ ಜನಪ್ರತಿನಿಧಿಗಳು ಅದ್ಯಾಕೋ ಈವರೆಗೂ ಇಲ್ಲಿನ ಜನರ ಭಾವನೆಗಳನ್ನು ಅರ್ಥಮಾಡಿಲ್ಲವಾಗಿದೆ.

ಇತ್ತೀಚೆಗಷ್ಟೆ ಹಾಡಹಗಲೇ ಕರೋಪಾಡಿ ಪಂಚಾಯತಿಗೆ ನುಗ್ಗಿದ ದುಷ್ಕರ್ಮಿಗಳು ಉಪಾಧ್ಯಕ್ಷ ಜಲೀಲ್ ಅವರನ್ನು ಕೊಚ್ಚಿ ಪರಾರಿಯಾಗಿದ್ದರು. ಜಲೀಲ್ ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಎಡವಿದ್ದಾರೆಂದು ಜಲೀಲ್ ಕುಟುಂಬ ಮತ್ತು ಅಭಿಮಾನಿಗಳು ಆರೋಪಿಸುತ್ತಿದ್ದು ಸಿಒಡಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಈ ಮಧ್ಯೆ ಜಲೀಲ್ ಹತ್ಯೆಗೆ ಪ್ರತೀಕಾರ ತೀರಿಸಲು 2 ಗುಂಪುಗಳು ಹವಣಿಸುತ್ತಿರುವ ಬಗ್ಗೆ ಸಾರ್ವಜನಿಕವಾಗಿ ಕೇಳಿಬರುತ್ತಿದೆ. ಜನಪ್ರತಿನಿಧಿಗಳು ಮತ್ತು ಪೊಲೀಸ್ ಇಲಾಖೆ ಇನ್ನಾದರೂ ಎಚ್ಚೆತ್ತುಕೊಂಡು ಇನ್ನೊಂದು ತಲೆ ಉರುಳುವ ಮುನ್ನವಾದರೂ ಕನ್ಯಾನದಲ್ಲಿ ಪೊಲೀಸ್ ಹೊರಠಾಣೆ ತೆರೆಯುವಂತೆ ನಾಗರಿಕರು ಒತ್ತಾಯಿಸಿದ್ದಾರೆ.