80ರಲ್ಲೂ ನಿರ್ಭಯದಿಂದ ಹಾವು ಹಿಡಿಯುತ್ತಾಳೆ ಕನ್ನಮ್ಮ

ಆಕೆಗೆ ಹಲವಾರು ಬಾರಿ ಹಾವು ಕಚ್ಚಿದರೂ ಆಕೆ ಒಮ್ಮೆಯೂ ಆಸ್ಪತ್ರೆಯತ್ತ ಮುಖ ಮಾಡಿದವಳಲ್ಲ.

ಈಕೆಯ ಹೆಸರು ಕನ್ನಮ್ಮ. ವಯಸ್ಸು 80. ಚಿತ್ತೂರು ಸಮೀಪದ ಯಡಮರ್ರಿ ಮಂಡಲದ ಕೋತೂರು ಗ್ರಾಮದಲ್ಲಿ ಈಕೆಯ ವಾಸ್ತವ್ಯ. ಈ ವೃದ್ಧೆಯ ವಿಶೇಷತೆ ಏನಂತೀರಾ ? ಈಕೆ ಅಂತಿಂಥವಳಲ್ಲ. ಹಾವು ಹಿಡಿಯುವುದರಲ್ಲಿ ಈಕೆ ಮಹಾ ಚತುರೆ. ಸುತ್ತಮುತ್ತಲಿನ ಗ್ರಾಮಗಳಲ್ಲೆಲ್ಲಾ ಈಕೆ ಫೇಮಸ್ಸು. ಈ ಇಳಿ ವಯಸ್ಸಿನಲ್ಲೂ ಹಾವುಗಳನ್ನು ಅದು ಹೇಗೆ ಹಿಡಿಯುತ್ತಾಳೆಂದು ಆಶ್ಚರ್ಯವೇ ? ಈಕೆ ಅದೆಷ್ಟು ಉತ್ಸಾಹದ ಚಿಲುಮೆಯೆಂದರೆ ಯುವತಿಯರೂ ನಾಚಬೇಕು.
ಎಲ್ಲಾದರೂ ಹಾವು ಸುತ್ತಾಡುತ್ತಿದೆ ಎಂದು ಸುದ್ದಿ ಸಿಕ್ಕಿದರಷ್ಟೇ ಸಾಕು. ಕ್ಷಣ ಮಾತ್ರದಲ್ಲಿ ಕನ್ನಮ್ಮ ಅಲ್ಲಿ ಹಾಜರ್. ಹಾವು ಹಿಡಿಯಲು ಆಕೆಗೆ ಕೋಲು ಏನೂ ಬೇಕಾಗಿಲ್ಲ. ಆಕೆಯ ಕೈಗಳೇ ಸಾಕು. ಪೊದೆಗಳೆಡೆಯಲ್ಲಿ ಹಾವು ಅವಿತಿದ್ದರೂ ಆಕೆ ಅಲ್ಲಿಗೂ ನುಗ್ಗುತ್ತಾಳೆ, ಸಲೀಸಾಗಿ ಮರ ಹತ್ತಿ ಹಾವು ಅಲ್ಲಿದ್ದರೆ ಹಿಡಿದು ಬಿಡುತ್ತಾಳೆ. ಗೋಡೆಗಳನ್ನೂ ಲೀಲಾಜಾಲವಾಗಿ ಏರುತ್ತಾಳೆ.
ಹಾವು ಎಲ್ಲಿ ಅಡಗಿದೆ ಎಂದು ಮೊದಲು ತಿಳಿದುಕೊಂಡು ನೆಲಕ್ಕೆ ಮೆಲ್ಲನೆ ಕುಟ್ಟಿ ಹಾವು ತನ್ನ ಅಡಗುತಾಣದಿಂದ ಹೊರ ಬರುವಂತೆ ಮಾಡುತ್ತಾಳೆ. ನಂತರ ಅದನ್ನು ಕೈಯ್ಯಿಂದ ಮೇಲೆತ್ತಿ ಅದು ತನ್ನ ಕೈಗಳಲ್ಲಿ ಸುರಳಿ ಸುತ್ತುವಂತೆ ಮಾಡುತ್ತಾಳೆ. ಆಕೆಗೆ ಹಲವಾರು ಬಾರಿ ಹಾವು ಕಚ್ಚಿದರೂ ಆಕೆ ಒಮ್ಮೆಯೂ ಆಸ್ಪತ್ರೆಯತ್ತ ಮುಖ ಮಾಡಿದವಳಲ್ಲ.
ಹಾವುಗಳ ನಾಲಗೆಯನ್ನು ಒಮ್ಮೆ ನೋಡಿದರಷ್ಟೇ ಸಾಕು. ಅದು ಒಳ್ಳೆಯ ಹಾವೇ ಅಥವಾ ಕೆಟ್ಟ ಹಾವೇ ಎಂದು ಆಕೆ ಹೇಳುತ್ತಾಳೆ. ಸಾಮಾನ್ಯ ಹಾವುಗಳಿಂದ ಹಿಡಿದು ಹೆಬ್ಬಾವನ್ನು ಆಕೆ ಹಿಡಿದ ದಿಟ್ಟ ಮಹಿಳೆ ಕನ್ನಮ್ಮ.
ಈಕೆ ಹಿಡಿದ ಹಾವುಗಳ ಗತಿ ಅವಳ `ಮೂಡ್’ ಮೇಲೆ ಅವಲಂಬಿಸಿದೆ. ಕೆಲವೊಮ್ಮೆ ಆಕೆ ತಾನು ಹಿಡಿದ ಹಾವುಗಳನ್ನು ಸಾಯಿಸಿದರೆ ಇನ್ನು ಕೆಲವೊಮ್ಮೆ ಅವುಗಳನ್ನು ಅರಣ್ಯಗಳಲ್ಲಿ ಬಿಟ್ಟುಬಿಡುತ್ತಾಳೆ.
ಕನ್ನಮ್ಮ ಮೊದಲು ಹಾವು ಹಿಡಿದಾಗ ಆಕೆಯ ವಯಸ್ಸು ಕೇವಲ 10. ನಂತರ ಆಕೆ ಹಿಡಿದ ಹಾವುಗಳಿಗೆ ಲೆಕ್ಕವಿಲ್ಲ. ಚಿತ್ತೂರು-ತಮಿಳುನಾಡು ಗಡಿ ಪ್ರದೇಶದ ಎರಡು ಡಜನಿಗೂ ಅಧಿಕ ಹಳ್ಳಿಗಳ ಜನರಿಂದ ಹಾವು ಹಿಡಿಯಲು ಕರೆ ಬಂದಾಕ್ಷಣ ಆಕೆ ಅಲ್ಲಿಗೆ ಓಡೋಡಿ ಹೋಗುತ್ತಾಳೆ.
ಕನ್ನಮ್ಮ ಹೇಗೆ ಮಹಾನ್ ಧೈರ್ಯವಂತೆಯೋ ಹಾಗೆಯೇ ಸ್ವಾಬಿಮಾನಿ ಕೂಡ. ಈ ಇಳಿ ವಯಸ್ಸಿನಲ್ಲೂ ಯಾರ ಹಂಗಿನಲ್ಲೂ ಆಕೆ ಜೀವಿಸಲು ಬಯಸುವುದಿಲ್ಲ. ಆಕೆಯ ಪತಿ ಕೃಷ್ಣಯ್ಯ ಮೂರು ದಶಕಗಳ ಹಿಂದೆ ತೀರಿಕೊಂಡಂದಿನಿಂದ ಆಕೆ ತನ್ನ ಗುಡಿಸಲಿನಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದಾಳೆ. ಕನ್ನಮ್ಮಳ ಮಗಳು ಹಾಗೂ ಮಗ ಆಕೆಗೆ ಸಹಾಯ ಮಾಡುತ್ತಿದ್ದರೂ ಅವರ ಮೇಲೆ ಅವಲಂಬಿಸಲು ಆಕೆಗೆ ಮನಸ್ಸಿಲ್ಲ. ಸದಾ ಏನಾದರೊಂದು ಕೆಲಸ ಮಾಡುತ್ತಲೇ ಇರುವ ಕನ್ನಮ್ಮ ಗದ್ದೆಗಳಲ್ಲಿ ದುಡಿಯುತ್ತಾಳೆ ಹಾಗೂ ನೆರೆಹೊರೆಯವರಿಗೆ ಸಣ್ಣಪುಟ್ಟ ಕೆಲಸ ಮಾಡಿಕೊಟ್ಟು ಅಲ್ಪಸ್ವಲ್ಪ ಸಂಪಾದಿಸಿ ನೆಮ್ಮದಿಯ ಜೀವನ ನಡೆಸುತ್ತಿದ್ದಾಳೆ.
ಇತ್ತೀಚೆಗೆ ಕನ್ನಮ್ಮ ತನ್ನ ಸ್ವಂತ ಗ್ರಾಮದಲ್ಲಿ ನಾಗರ ಹಾವೊಂದನ್ನು ಹಿಡಿದಿದ್ದಾಳೆ. “ಈ ಹಾವು ಬಹಳ ಸಿಟ್ಟುಗೊಂಡಿತ್ತು ಎಂದು ನನಗೆ ತಿಳಿದಿತ್ತು. ಗ್ರಾಮವನ್ನು ಬಿಟ್ಟು ಹೋಗುವ ಮನಸ್ಸು ಅದಕ್ಕಿರಲಿಲ್ಲ. ಈ ಕಾರಣಕ್ಕಾಗಿ ನಾನು ಅದನ್ನು ಕೊಂದುಬಿಟ್ಟೆ” ಎನ್ನುತ್ತಾಳೆ ಕನ್ನಮ್ಮ.