ಕನ್ನಡದಲ್ಲಿ ವ್ಯವಹಾರ ಶೀಘ್ರ ಪರಿಹಾರ

ಅವಿಭಜಿತ ದ ಕ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕನ್ನಡ ಭಾಷೆ ಕಾಣೆಯಾಗುತ್ತಿದೆಯೇ ಎಂಬಂತೆ ಭಾಸವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಸಿಬ್ಬಂದಿಗಳು ಅನ್ಯ ಭಾಷಿಕರಾಗಿರುವುದು. ದಿನನಿತ್ಯ ಗ್ರಾಹಕರ ಜೊತೆ ಇವರು ವ್ಯವಹರಿಸುವುದು ಹಿಂದಿ, ಮಲೆಯಾಳ ಅಥವಾ ಇಂಗ್ಲಿಷಿನಲ್ಲಿ ಮಾತ್ರ. ವಿದ್ಯಾವಂತರು ಆಧುನಿಕ ತಂತ್ರಜ್ಞಾನದ ಮೂಲಕ ಬ್ಯಾಂಕಿಂಗ್ ವ್ಯವಹಾರವನ್ನು ತಾವಿರುವ ಸ್ಥಳದಿಂದಲೇ ಮಾಡುತ್ತಾರೆ. ಆದರೆ ಬಡ ಅನಕ್ಷರಸ್ಥ ಜನರು ಬ್ಯಾಂಕುಗಳಿಗೆ ಬರಲೇಬೇಕು. ಇವರಿಗೆ ಕನ್ನಡ ಬಿಟ್ಟರೆ ಬೇರೆ ಭಾಷೆ ಬರುವುದಿಲ್ಲ. ಬ್ಯಾಂಕ್ ಅಧಿಕಾರಿಗಳು ಹಿಂದಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಇವರ ಜೊತೆ ಮಾತಾಡಿದರೆ ಏನು ಪ್ರಯೋಜನ
ಗ್ರಾಹಕರು ಭಾಷಾ ಸಮಸ್ಯೆಯಿಂದ, ಸರಿಯಾದ ಮಾಹಿತಿ ಕೊರತೆಯಿಂದ ಕೊರಗುತ್ತಾರೆ. ಭಾಷೆ ಜ್ಞಾನವಿಲ್ಲದೆ ಬ್ಯಾಂಕಿನ ಎಷ್ಟೋ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಸರಕಾರ ರಾಜ್ಯದ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕನ್ನಡ ಭಾಷೆ ಬಲ್ಲ ಸಾರ್ವಜನಿಕ ಸಂಪರ್ಕಾಧಿಕಾರಿಗಳನ್ನು ನೇಮಿಸಿ `ಕನ್ನಡದಲ್ಲಿ ವ್ಯವಹಾರ ಶೀಘ್ರ ಪರಿಹಾರ’ ಎಂಬ ಮಾತನ್ನು ನಿಜಪಡಿಸಲಿ

  • ಕೆ ಮನೋಹರ  ಕೊಪ್ಪಲಂಗಡಿ ಕಾಪು