ಆಸ್ಟ್ರೇಲಿಯಾದಲ್ಲಿ ಕನ್ನಡದ ಕಂಪು

ಸರಕಾರಿ ಶಾಲೆಗಳಲ್ಲಿ ಕನ್ನಡ ತರಗತಿಗಳು

ಮೆಲ್ಬೋರ್ನ್ : ಕನ್ನಡದ ನೆಲವಾದ ಕರ್ನಾಟಕದಲ್ಲಿಯೇ ಕನ್ನಡ ಮಾಧ್ಯಮದಲ್ಲಿ ಕಡ್ಡಾಯ ಶಿಕ್ಷಣ ಒದಗಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿದ್ದರೆ ದೂರದ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದಲ್ಲಿನ ಸರಕಾರಿ ಶಾಲೆಗಳು ಈಗಾಗಲೇ ತಮ್ಮ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸುತ್ತಿವೆ. ಅಷ್ಟೇ ಅಲ್ಲ, ಅಲ್ಲಿನ ವಿದ್ಯಾರ್ಥಿಗಳು ತಮ್ಮ ಹನ್ನೆರಡನೇ ತರಗತಿ ಬೋರ್ಡ್ ಪರೀಕ್ಷೆಗೆ ಕನ್ನಡವನ್ನು ಎರಡನೇ ಭಾಷೆಯಾಗಿಯೂ ಆಯ್ದುಕೊಳ್ಳಬಹುದು.

ಈ ವರ್ಷದಿಂದ ಆಸ್ಟ್ರೇಲಿಯಾದಲ್ಲಿ ವಿಕ್ಟೋರಿಯ ಸರಕಾರದಿಂದ ನಡೆಸಲ್ಪಡುವ ಶಾಲೆಗಳು ಕನ್ನಡ ಕಲಿಸುತ್ತಿವೆ. ವಿಕ್ಟೋರಿಯಾ ಸ್ಕೂಲ್ ಆಫ್ ಲ್ಯಾಂಗ್ವೇಜಸ್ ಮೂಲಕ ಇದು ಜಾರಿಗೊಳ್ಳುತ್ತಿದೆ. ಮೆಲ್ಬೋರ್ನ್ ಕನ್ನಡ ಸಂಘ ಈ ಬಗ್ಗೆ ಸಂಸ್ಥೆಗೆ ಮನವಿ ಸಲ್ಲಿಸಿ ಸರಕಾರಿ ಶಾಲೆಗಳಲ್ಲಿ ಕನ್ನಡವನ್ನು ಐಚ್ಛಿಕ ವಿಷಯವಾಗಿ ಸೇರ್ಪಡೆಗೊಳಿಸಬೇಕೆಂದು ಕೋರಿತ್ತು. ಈ ಮನವಿಯನ್ನು ಮನ್ನಿಸಿ ಹಾಗೂ ಮೆಲ್ಬೋರ್ನ್ ನಗರದಲ್ಲಿ ವಾಸಿಸುವ ಕನ್ನಡಿಗರ ಸಂಖ್ಯೆಯನ್ನು ಪರಿಗಣಿಸಿ ಕನ್ನಡ ತರಗತಿಗಳನ್ನು ವಾರಂತ್ಯದಲ್ಲಿ ಮೂರು ಗಂಟೆಗಳ ತನಕ ನಡೆಸಲಾಗುತ್ತದೆ. ಸದ್ಯ ಆಸ್ಟ್ರೇಲಿಯದಲ್ಲಿ ಉದ್ಯೋಗದಲ್ಲಿರುವ ಕನ್ನಡಿಗರೇ ಈ ವಾರಾಂತ್ಯ ತರಗತಿಗಳ ಶಿಕ್ಷಕರಾಗಿದ್ದು, ಅವರಿಗೆ ಸರಕಾರ ವೇತನವೊದಗಿಸುತ್ತಿದೆ.

ಈ ತರಗತಿಗಳಿಗೆ ಅಗತ್ಯವಿರುವ ಪಠ್ಯ ಪುಸ್ತಕಗಳನ್ನು ಕರ್ನಾಟಕದಿಂದ ಆಸ್ಟ್ರೇಲಿಯಾಗೆ ವಿಮಾನ ಮೂಲಕ ಸಾಗಿಸಲಾಗುತ್ತದೆ. ಮೂರು ಹಂತಗಳಲ್ಲಿ ಕನ್ನಡ ಭಾಷೆಯನ್ನು ಕಲಿಸಲಾಗುತ್ತದೆ. ಆರಂಭದಲ್ಲಿ ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದ ಮೂಲಕ ಭಾಷೆ ಕಲಿಸಲಾಗುವುದಲ್ಲದೆ ನಂತರ ಓದಲು, ಬರೆಯಲು ಕಲಿಸಲಾಗುತ್ತದೆ.

ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಸಂಘವು ಮುಂದಿನ ವರ್ಷಗಳಲ್ಲಿ ಇದೇ ರೀತಿ ತೆಲುಗು ಭಾಷೆಯನ್ನೂ ಐಚ್ಛಿಕ ವಿಷಯವನ್ನಾಗಿಲು ಪ್ರಯತ್ನಿಸಲಿದೆ.