ಉಪೇಂದ್ರ ಹೊಸ ಪಕ್ಷಕ್ಕೆ ಚಾಲನೆ

ಸ್ಯಾಂಡಲ್ವುಡ್ಡಿನ ರಿಯಲ್ ಸ್ಟಾರ್ ಖ್ಯಾತಿಯ ಉಪೇಂದ್ರ ತಮ್ಮ ಹೊಸ ಕಲ್ಪನೆಯ ಪಕ್ಷಕ್ಕೆ ಚಾಲನೆ ನೀಡಿದ್ದಾರೆ. ಪ್ರಜಾಕೀಯ, ಪ್ರಜಾಕಾರಣ, ಪ್ರಜಾನೀತಿ ಎನ್ನುವ ಧ್ಯೇಯ ವಾಕ್ಯ ಇಟ್ಟುಕೊಂಡು ಉಪೇಂದ್ರ ಹೊಸ ಪಕ್ಷ ಶುರು ಮಾಡುವುದಾಗಿ ಹೇಳಿದ್ದಾರೆ. ನಿನ್ನೆ ತಮ್ಮ ರೆಸಾರ್ಟಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಉಪೇಂದ್ರ ತಮ್ಮ ಕನಸಿನ ಸಮಾಜ ಕಟ್ಟುವ ಬಗ್ಗೆ ಹೇಳಿಕೊಂಡಿದ್ದಾರೆ. ಖಾಕಿ ಬಟ್ಟೆ ಹಾಕಿ, “ನಾನು ಒಬ್ಬ ಕಾರ್ಮಿಕ” ಅಂತ ಹೇಳಿ ಉಪೇಂದ್ರ ತಮ್ಮ ಹೊಸ ಪಕ್ಷ ಮತ್ತು ಅದರ ಯೋಜನೆಗಳ ಬಗ್ಗೆ ವಿವರಿಸಿದ್ದಾರೆ.

“ನಮಗೆ ಜನ ಸೇವಕರು ಬೇಡ, ಜನ ನಾಯಕರು ಬೇಡ, ನಮಗೆ ಕಾರ್ಮಿಕರು ಬೇಕು. ಅದಕ್ಕೆ ನಾನು ಖಾಕಿ ಬಟ್ಟೆ ಹಾಕಿಕೊಂಡು ಬಂದಿದ್ದೇನೆ. ಜನರ ತೆರಿಗೆ ದುಡ್ಡು ಪಾರದರ್ಶಕವಾಗಿ ಬಳಕೆ ಆಗಬೇಕು ಅಂತ ಈ ವೇದಿಕೆ ಮಾಡಿದ್ದೇವೆ” ಎಂದಿದ್ದಲ್ಲದೇ “1 ರೂಪಾಯಿ ಹಾಕೊಲ್ಲ, 1 ರೂಪಾಯಿ ತೆಗೆಯೋಲ್ಲ. ದುಡ್ಡು ಇಲ್ಲದೆ ಒಂದು ಪಕ್ಷ ಮಾಡುತ್ತಿದ್ದೇವೆ. ಇಲ್ಲಿ ಜಾತಿ, ಧರ್ಮ ಯಾವುದೂ ಇರುವುದಿಲ್ಲ. ನನಗೆ ಗೆಲುವು ಸೋಲು ಮುಖ್ಯ ಅಲ್ಲ” ಎಂದಿದ್ದಲ್ಲದೇ ಎಲ್ಲರೂ ಬಂದು ಕೈ ಜೋಡಿಸುವಂತೆ ಕೇಳಿಕೊಂಡಿದ್ದಾರೆ.

“ಸದ್ಯ ಒಂದು ವೇದಿಕೆ ಶುರು ಮಾಡಿದ್ದೇವೆ. ನಂತರ ಈ ಪಕ್ಷಕ್ಕೆ ಒಂದು ಹೆಸರು ಮತ್ತು ಚಿಹ್ನೆಯನ್ನು ಚುನಾವಣಾ ಆಯೋಗದಿಂದ ಪಡೆದುಕೊಳ್ಳುತ್ತೇವೆ. ಜೊತೆಗೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ” ಎಂದು ಉಪೇಂದ್ರ ತಮ್ಮ ಯೋಜನೆಯನ್ನು ಬಹಿರಂಗ ಗೊಳಿಸಿದ್ದಾರೆ.