ಕೊನೆಗೂ ಕಂಚಿಕಾರ ಪೇಟೆ ಸೇತುವೆ ಸಂಚಾರಕ್ಕೆ ಮುಕ್ತ

ಕಂಚಿಕಾರಪೇಟೆ ಸೇತುವೆಯ ಬದಿಗಳಿಗೆ ಡಾಮರೀಕರಣ ನಡೆಸಲಾಗಿದೆ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ತಾಲೂಕಿನ ಬಿ ಮೂಡ ಗ್ರಾಮದ ಗೂಡಿನಬಳಿ ಸಮೀಪದ ಕಂಚಿಕಾರ ಪೇಟೆ ಎಂಬಲ್ಲಿ ಸಂಪೂರ್ಣ ಶಿಥಿಲಗೊಂಡಿದ್ದ ಕಿರು ಸೇತುವೆಯನ್ನು ಕಳೆದ ವರ್ಷವೇ ನೂತನವಾಗಿ ನಿರ್ಮಿಸಲಾಗಿತ್ತಾದರೂ ಕೆಲ ಕಾರಣಗಳಿಗಾಗಿ ಉದ್ಘಾಟನೆ ಭಾಗ್ಯ ಕಾಣದೆ ನೆನೆಗುದಿಗೆ ಬಿದ್ದಿತ್ತು. ಇದರಿಂದ ಈ ಸೇತುವೆ ಮೂಲಕ ವಾಹನ ಸಂಚಾರಕ್ಕೆ ಅಧಿಕೃತ ಮುದ್ರೆ ಬಿದ್ದಿರಲಿಲ್ಲ. ಈ ಬಗ್ಗೆ `ಕರಾವಳಿ ಅಲೆ’ ಈ ಹಿಂದೆ ಸಚಿತ್ರ ವರದಿ ಪ್ರಕಟಿಸಿ ಸಚಿವರನ್ನು ಹಾಗೂ ಲೋಕೋಪಯೋಗಿ ಇಲಾಖಾ ಇಂಜಿನಿಯರುಗಳನ್ನು ಎಚ್ಚರಿಸಿತ್ತು.

ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಈ ಸೇತುವೆಯನ್ನು ಉದ್ಘಾಟಿಸಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಿದರು. ಕಳೆದ ಹಲವು ವರ್ಷಗಳಿಂದ ಇಲ್ಲಿನ ಕಿರು ಸೇತುವೆ ಕುಸಿತಕ್ಕೊಳಗಾಗಿದ್ದ ಪರಿಣಾಮ ಬಂಟ್ವಾಳದಿಂದ ಪಾಣೆಮಂಗಳೂರು, ಗೂಡಿನಬಳಿಗೆ ಸಂಚರಿಸುವ ಈ ಒಂದು ಸುಲಲಿತ ದಾರಿ ಮುಚ್ಚಿ ಹೋಗಿತ್ತು. ಇಲ್ಲಿಗೆ ನೂತನ ಸೇತುವೆ ನಿರ್ಮಾಣ ಇಲ್ಲಿನ ನಾಗರಿಕರ ಬಹುದಿನಗಳ ಕನಸಾಗಿತ್ತು. ಈ ಬಗ್ಗೆ ಸಾಕಷ್ಟು ಬಾರಿ ಸಚಿವ ರಮಾನಾಥ ರೈ ಸಹಿತ ಇಲಾಖಾಧಿಕಾರಿಗಳಿಗೆ ಮನವಿಯನ್ನೂ ಸ್ಥಳೀಯರು ಸಲ್ಲಿಸಿದ್ದರು.

ಈ ಬಗ್ಗೆ ಕೊನೆಗೂ ಸ್ಪಂದಿಸಿದ ಸಚಿವ ರಮಾನಾಥ ರೈ ಈ ಸೇತುವೆ ನಿರ್ಮಾಣಕ್ಕೆ ಸುಮಾರು 1 ಕೋಟಿ ರೂಪಾಯಿ ಅನುದಾನವನ್ನು ಲೋಕೋಪಯೋಗಿ ಇಲಾಖೆ ಮೂಲಕ ಮಂಜೂರಗೊಳಿಸಿ ಸೇತುವೆ ನಿರ್ಮಾಣಕ್ಕೆ ಸಹಕರಿಸಿದ್ದರು. ಅದರಂತೆ ಸೇತುವೆ ನಿರ್ಮಾಣದ ಕಾಮಗಾರಿಯೂ ಆರಂಭಗೊಂಡು ಕಳೆದ ವರ್ಷವೇ ಸೇತುವೆ ನಿರ್ಮಾಣಗೊಂಡಿದ್ದರೂ ರಸ್ತೆಗೆ ಡಾಮರೀಕರಣ ನಡೆಯದೆ ಉದ್ಘಾಟನೆ ನಡೆದಿರಲಿಲ್ಲ. ಇದರಿಂದಾಗಿ ಸೇತುವೆ ಆದರೂ ವಾಹನ ಸಂಚಾರ ಇಲ್ಲದೆ ನಿಂತಿತ್ತು. ಇದೀಗ ಇತ್ತೀಚೆಗೆ ಸೇತುವೆಯ ಎರಡೂ ಬದಿಗಳಿಗೆ ಡಾಮರೀಕರಣವನ್ನೂ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಸೇತುವೆಯನ್ನು ಲೋಕಾರ್ಪಣೆಗೊಳಿಸಿದ್ದಾರೆ.