ವ್ಯಾಜ್ಯ ಇದ್ದವರಿಗೆ ಇದು ಕೋರ್ಟ್, ಭಕ್ತರಿಗೆ ದೇವಳ

ಕಾನತ್ತೂರು ನ್ಯಾಯ ಮಂದಿರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕೇರಳದ ಕಾಸರಗೋಡು ಜಿಲ್ಲೆಯ ಕಾನತ್ತೂರಿನ ನಾಲ್ವರು ದೈವಸ್ಥಾನವು ನ್ಯಾಯ ದೇಗುಲ ಅಥವಾ ನ್ಯಾಯದ ದೇವಾಲಯವಾಗಿ ಜನಪ್ರಿಯವಾಗಿದೆ. ಮಂಗಳೂರಿನಿಂದ ಸುಮಾರು 90 ಕಿ ಮೀ ಅಂತರದಲ್ಲಿರುವ ಈ ದೈವಸ್ಥಾನವು ಒಂದೆಡೆಯಲ್ಲಿ ದೇವಾಲಯವಾಗಿ ಇನ್ನೊಂದೆಡೆಯಲ್ಲಿ ಕೋರ್ಟಾಗಿ ಕೂಡ ಕೆಲಸ ನಿರ್ವಹಿಸುತ್ತಿದೆ. ಈ ದೇವಾಲಯದಲ್ಲಿ ಬಹಳ ಹಿಂದಿನಿಂದಲೇ ನ್ಯಾಯತೀರ್ಮಾನ ನೀಡಲಾಗುತ್ತಿದೆ. ಜನರ ಪಾಲಿಗೆ ಇಲ್ಲಿನ ತೀರ್ಪೇ ಅಂತಿಮ. ಈ ದೇವಾಲಯವೇ ಸರ್ವೋಚ್ಚ ನ್ಯಾಯಾಲಯ.

ಭೂವ್ಯಾಜ್ಯ, ಕುಟುಂಬ ವ್ಯಾಜ್ಯ, ಸಂಸಾರ ಕಲಹ, ಕಳ್ಳತನ, ದರೋಡೆ ಹೀಗೆ ಹಲವು ರೀತಿಯ ವ್ಯಾಜ್ಯಗಳಿಗೆ ಈ ದೈವಸ್ಥಾನ ತೀರ್ಪು ನೀಡಿದೆ. ದೂರುದಾರರು ದೇವಸ್ಥಾನಕ್ಕೆ ಬಂದು ನ್ಯಾಯಕ್ಕಾಗಿ ದೇವರ ಮುಂದೆ ಬೇಡಿಕೊಳ್ಳುತ್ತಾರೆ. ದೇವಸ್ಥಾನದ ಅಧಿಕಾರಿಗಳು ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸುತ್ತಾರೆ. ನಂತರ ದಿನ ನಿಗದಿಗೊಳಿಸಿ ದೇವಸ್ಥಾನಕ್ಕೆ ಭೇಟಿ ನೀಡುವಂತೆ ಸೂಚಿಸುತ್ತಾರೆ. ಶಿಕ್ಷೆಗಳು ದೇವರ ಮುಂದೆ ಅಡ್ಡಬೀಳುವುದರಿಂದ ಹಿಡಿದು ಪ್ರತಿವಾದಿಗಳ ನಷ್ಟವನ್ನು ಭರಿಸಲು ದಂಡ ವಿಧಿಸುವಲ್ಲಿವರೆಗೆ… ತಪ್ಪಿನ ಮಟ್ಟಕ್ಕೆ ಸಮನಾದ ಶಿಕ್ಷೆಗಳನ್ನು ವಿಧಿಸಲಾಗುತ್ತದೆ ಎಂದು ಮೀಯಪದವಿನ ಇಲ್ಲಿನ ಭಕ್ತರೊಬ್ಬರು ಹೇಳಿದ್ದಾರೆ.

“ಒಂದು ವೇಳೆ ಪ್ರತಿವಾದಿಗೆ ಎರಡು ನೋಟಿಸ್ ಕಳುಹಿಸಿದರೂ ದೇವಸ್ಥಾನಕ್ಕೆ ಭೇಟಿ ನೀಡದೇ ಇದ್ದರೆ ಪ್ರಕರಣವನ್ನು ದೇವರಿಗೆ ಬಿಡಲಾಗುತ್ತದೆ” ಎಂದು ಅವರು ವಿವರಿಸುತ್ತಾರೆ.

“ದೇವಸ್ಥಾನಕ್ಕೆ ಬರುವ ಪ್ರಕರಣಗಳಲ್ಲಿ ಶೇಕಡಾ 90 ಪ್ರಕರಣಗಳು ಇತ್ಯರ್ಥವಾಗಿವೆ. ದೇವರಿಗೆ ಬಿಟ್ಟ ಪ್ರಕರಣಗಳು ಕೂಡ ಐದು ವರ್ಷಗಳೊಳಗೆ ಇತ್ಯರ್ಥವಾಗುತ್ತವೆ. ದೈವಸ್ಥಾನದ ತೀರ್ಪಿಗೆ ಬದ್ಧರಾಗಿದವರೂ ಐದು ವರ್ಷಗಳೊಳಗೆ ಶಿಕ್ಷೆ ಅನುಭವಿಸುತ್ತಾರೆ, ದೇವಾಲಯವು ಏಕರೂಪ ಮತ್ತು ಸಮಯಬದ್ಧ ನ್ಯಾಯ ನೀಡುವ ವ್ಯವಸ್ಥೆಯನ್ನು ಪಾಲಿಸುತ್ತಿದೆ. ದೇವರ ಮಧ್ಯಪ್ರವೇಶ ಕೇಳುವಾಗ ಸಹನೆ ಮತ್ತು ಸತ್ಯವನ್ನು ಪಾಲಿಸಲು ನಾವು ಜನರಿಗೆ ಸಲಹೆ ನೀಡುತ್ತೇವೆ” ಎಂದು ದೇವಸ್ಥಾನದ ವ್ಯವಸ್ಥಾಪಕ ಕೆ ಪಿ ಗೋಪಾಲನ್ ನಾಯರ್ ಹೇಳಿದ್ದಾರೆ.

ಸುಮಾರು 800 ವರ್ಷಗಳ ಪರಂಪರೆ ಹೊಂದಿರುವ ಕಾನತ್ತೂರು ನಲ್ವಾರ್ ದೇಗುಲ ಕೇರಳದ ನಾಯರ್ ಕುಟುಂಬಕ್ಕೆ ಸೇರಿದ್ದು. ದೇವಸ್ಥಾನಕ್ಕೆ ಬರುವ ಆದಾಯವನ್ನು ಅಭಿವೃದ್ಧಿ ಕಾರ್ಯಕ್ರಮ ಮತ್ತು ಪ್ರತಿದಿನ ಅನ್ನಪ್ರಸಾದ ಮತ್ತು ಧಾರ್ಮಿಕ ಆಚರಣೆಗಳಿಗಾಗಿ ಬಳಸಲಾಗುತ್ತಿದೆ. ಈ ದೈವಸ್ಥಾನ ಶೀಘ್ರ ನ್ಯಾಯ ನೀಡಿ ಹೆಸರುವಾಸಿಯಾಗಿದೆ.

ಅಂದಹಾಗೆ ಇಲ್ಲಿರುವ ದೈವವು ನಾಲ್ಕು ಶಕ್ತಿಗಳ ಮಿಶ್ರಣ, ಇಂತಹ ಅಪರೂಪದ ಶಕ್ತಿಯನ್ನು ಹೊಂದಿರುವ ದೈವವು ಭಾರೀ ಕಾರಣಿಕವುಳ್ಳದ್ದು ಎಂಬುದು ಈಗಾಗಲೇ ಸಾಬೀತಾಗಿದೆ. ಚಾಮುಂಡಿ, ರಕ್ತೇಶ್ವರಿ, ವಿಷ್ಣುಮೂರ್ತಿ ಮತ್ತು ಗುಳಿಗ ದೈವಗಳು ಈ ದೇವಸ್ಥಾನದಲ್ಲಿ ಒಂದು ದೈವವಾಗಿ ನೆಲೆಯಾಗಿದೆ ಎಂಬುದು ಪ್ರತೀತಿ.

ಕರ್ನಾಟಕದ ಗ್ರಾಮೀಣ ಪ್ರದೇಶಗಳಿಂದ, ಬೆಂಗಳೂರು, ಮೈಸೂರು ಮತ್ತು ಕೇರಳ ಮೊದಲಾದ ಕಡೆಗಳಿಂದ ಭಕ್ತರು ದೇವಸ್ಥಾನ ಸಂದರ್ಶಿಸುತ್ತಿದ್ದಾರೆ. ಕೆಲವು ಜನರು ಕಾನತ್ತೂರು ಅಪ್ಪೆ ಎಂದೇ ಕರೆಯುತ್ತಾರೆ. ವಾರ್ಷಿಕ ಜಾತ್ರೋತ್ಸವ ಪ್ರತಿವರ್ಷ ಡಿಸೆಂಬರ್ ತಿಂಗಳಲ್ಲಿ ನಡೆಯುತ್ತದೆ. ದೈವಭಕ್ತರು ಕಾನತ್ತೂರು ಹೆಸರನ್ನು ಉಚ್ಛರಿಸಲೂ ಭಯ ಪಡುವಷ್ಟು ಕಾರಣಿಕ ಈ ಕ್ಷೇತ್ರಕ್ಕಿದೆ.