ಪ್ರತಿಭಟನೆಯ `ಕಂಬಳ’ ಇಲ್ಲವೇ `ವಿಜಯೋತ್ಸವ’

ಜ 28ಕ್ಕೆ ಮೂಡುಬಿದಿರೆಯಲ್ಲಿ ಕಾರ್ಯಕ್ರಮಕ್ಕೆ ಸಿದ್ಧತೆ, ಸಮಾಲೋಚನಾ ಸಭೆಯಲ್ಲಿ ನಿರ್ಣಯ

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ತುಳುನಾಡಿನ ಸಾಂಪ್ರದಾಯಿಕ ಕ್ರೀಡೆ ಕಂಬಳ ನಡೆಯುವ ಬಗ್ಗೆ ಹೈಕೋರ್ಟ್ ತೀರ್ಪಿಗೆ ಕಾಯುತ್ತಿರುವ ನಡುವೆಯೇ ಜ 28ರಂದು ತೀರ್ಪು ಪರವಾಗಿ ಬಂದರೆ ವಿಜಯೋತ್ಸವ ಇಲ್ಲವಾದರೆ ಕಂಬಳ ನಡೆಸುವ ಮೂಲಕವೇ ಪ್ರತಿಭಟಿಸಲು ನಿರ್ಧರಿಸಲಾಗಿದೆ. ಕಾಸರಗೋಡು ಸೇರಿದಂತೆ ಅವಿಭಜಿತ ದ ಕ ಜಿಲ್ಲಾ ಕಂಬಳ ಸಮಿತಿಯ ವತಿಯಿಂದ ಕಂಬಳದ ಕೋಣಗಳ ಮಾಲಕರು, ಓಟಗಾರರು, ಹಿತೈಶಿಗಳ ಸಮಾಲೋಚನಾ ತುರ್ತು ಸಭೆ ಎಂ ಸಿ ಎಸ್.ಬ್ಯಾಂಕಿನ ಕಲ್ಪವೃಕ್ಷ ಸಭಾಂಗಣದಲ್ಲಿ ರವಿವಾರ ಸಂಜೆ ನಡೆದಿದ್ದು, ಈ ನಿರ್ಧಾರ ಕೈಗೊಳ್ಳಲಾಗಿದೆ.

ಹೈಕೋರ್ಟ್ ತೀರ್ಪು ಕಂಬಳದ ಪರವಾಗಿ ಬರಬಹುದು ಎಂಬ ವಿಶ್ವಾಸವಿದೆ. ಜ 28ರಂದು ಬೆಳಿಗ್ಗೆ 9ಕ್ಕೆ ಕರಾವಳಿಯ ಎಲ್ಲ ಕಂಬಳದವರು ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ಕೋಣಗಳೊಂದಿಗೆ ಸೇರಲಿದ್ದಾರೆ. ಅಲ್ಲಿಂದ ಮೆರವಣಿಗೆಯಲ್ಲಿ ಕಡಲಕೆರೆ ನಿಸರ್ಗಧಾಮದ ಕಂಬಳದ ಕರೆಗೆ ತೆರಳಿ ಅಲ್ಲಿ ಪ್ರತಿಭಟನೆ ಇಲ್ಲವೇ ವಿಜಯೋತ್ಸವ ಆಚರಿಸಲು ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯಿಸಲಾಗಿದೆ. ಈ ನಡುವೆ ಬಗ್ಗೆ ಜಾನಪದ ಕ್ರೀಡೆ ಕಂಬಳದ ಉಳಿವಿಗಾಗಿ ಜನರಲ್ಲಿ ಜಾಗೃತಿ ಪ್ರಜ್ಞೆ ಮೂಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಡಲಾಯಿತು.

ಇಚ್ಛಾಶಕ್ತಿಯ ಕೊರತೆ

“ರಾಜಕೀಯರಹಿತ ಒತ್ತಡಕ್ಕೆ ತಮಿಳು ನಾಡಿನಲ್ಲಿ ಜಲ್ಲಿಕಟ್ಟಿನ ಕ್ರೀಡೆಗೆ ಕೇಂದ್ರ ಸರ್ಕಾರವೂ ಮಣಿದಿದೆ. ನಮ್ಮಲ್ಲಿ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿದೆ. ಒಗ್ಗಟ್ಟಿನ ಜನಶಕ್ತಿಯ ಪ್ರದರ್ಶನ ಕಂಬಳದ ವಿಚಾರದಲ್ಲಿ ಅಗತ್ಯವಿದೆ” ಎಂದು ಬೆಳಪು ದೇವಿಪ್ರಸಾದ್ ಶೆಟ್ಟಿ ಹೇಳಿದರು.

“ಕಂಬಳ ಉಳಿಯಬೇಕು ಎನ್ನುವುದು ಜನತೆಯ ಆಶಯ. ಇದನ್ನು ಸರಕಾರಕ್ಕೆ ಕೋರ್ಟಿಗೆ ಮನವರಿಕೆ ಮಾಡುವ ಅಗತ್ಯವಿದೆ. ಅಗತ್ಯವಿರುವ ಹೋರಾಟಕ್ಕೆ ತಾವು ಜನತೆಯ ಪರವಾಗಿದ್ದು ಜೈಲಿಗೆ ಹೋಗಲೂ ಸಿದ್ಧ” ಎಂದು ಶಾಸಕ, ಮೂಡುಬಿದಿರೆ ಕಂಬಳ ಸಮಿತಿ ಅಧ್ಯಕ್ಷ ಕೆ ಅಭಯಚಂದ್ರ ಪ್ರಕಟಿಸಿದರು.

“ಕಂಬಳದ ಉಳಿವಿಗಾಗಿ ಸೂಕ್ತ ರೀತಿಯ ದಾಖಲೆಗಳ ಮೂಲಕ ನ್ಯಾಯಾಲಯಕ್ಕೆ ಮನವರಿಕೆ ಮಾಡುವ ಅಗತ್ಯವಿದೆ. ಪೇಜಾವರ ಶ್ರೀಗಳು, ಚಿತ್ರರಂಗದ ಪ್ರಮುಖರು ಕಂಬಳವನ್ನು ಬೆಂಬಲಿಸುತ್ತಿದ್ದಾರೆ” ಎಂದು ಮೂಡುಬಿದಿರೆ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಗುಣಪಾಲ ಕಡಂಬ ಹೇಳಿದರು.

ಜೆಡಿಎಸ್ ಮೂಡುಬಿದಿರೆ ಕ್ಷೇತ್ರಾಧ್ಯಕ್ಷ ಅಶ್ವಿನ್ ಪಿರೇರಾ ಮಾತನಾಡಿ, “ಕಂಬಳ ಎಲ್ಲರದ್ದು ಎಂಬ ಭಾವನೆ ಮೂಡಬೇಕು. ಶಾಲಾ ಕಾಲೇಜು ಮಕ್ಕಳು, ಚಿತ್ರರಂಗ ಸಂಘ ಸಂಸ್ಥೆಗಳು ಎಲ್ಲರೂ ಹೋರಾಟದಲ್ಲಿ ಜತೆಗೂಡಬೇಕು” ಎಂದರು. ಸಭೆಯಲ್ಲಿ ಹಲವಾರು ಮುಖಂಡರು ಉಪಸ್ಥಿತರಿದ್ದರು.