ಸುಪ್ರೀಂ ಕೋರ್ಟಿನಲ್ಲಿ ಕಂಬಳ ವಿಚಾರಣೆ ನ 17ರಂದು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕಂಬಳ ವಿರುದ್ಧ ಪೆಟಾ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನವೆಂಬರ್ 17ಕ್ಕೆ ಮುಂದೂಡಿದೆ. ಸೋಮವಾರದಂದು ಅರ್ಜಿದಾರರ ವಾದ ಆಲಿಸಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿಕೆ ಮಾಡಿದೆ.

ಮೂಡಬಿದಿರೆ ಕಂಬಳದಲ್ಲಿ ಕೋಣಗಳಿಗೆ ಹಿಂಸೆ ನೀಡಲಾಗಿದೆ ಎಂದು ಪೆಟಾ ಸುಪ್ರೀಂಕೋರ್ಟಿಗೆ ದೂರು ಸಲ್ಲಿಸಿದೆ. ಇದೇ ವೇಳೆ ಅದು ದಾಖಲೆಗಳನ್ನು ಸಲ್ಲಿಸಿದೆ.

ಕಂಬಳಕ್ಕೆ ಅವಕಾಶ ನೀಡಿ ಹೊರಡಿಸಿರುವ ಅಧ್ಯಾದೇಶ ಜಾರಿ ಮಾಡಿರುವ ರೀತಿ ಸರಿ ಇಲ್ಲ. ಇದು ಕಾನೂನಿಗೆ ವಿರುದ್ಧವಾಗಿದೆ ಎಂದು ಹೇಳಿ ಪೆಟಾ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತ್ರಿಸದಸ್ಯ ನ್ಯಾಯಪೀಠ ಮುಂದಿನ ವಿಚಾರಣೆಯನ್ನು ನವೆಂಬರ್ 13ಕ್ಕೆ ನಿಗದಿಪಡಿಸಿತ್ತು.

ನವೆಂಬರ್ 6ರಂದು ನಡೆದ ವಿಚಾರಣೆ ವೇಳೆ ಕಂಬಳಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಪೆಟಾ ಮಾಡಿದ್ದ ಮನವಿಯನ್ನು ಕೋರ್ಟ್ ತಿರಸ್ಕರಿಸಿತ್ತು. ಶನಿವಾರದಂದು ಮೂಡುಬಿದಿರೆಯಲ್ಲಿ ನಡೆದ ಕಂಬಳದಲ್ಲಿ ಕೋಣಗಳಿಗೆ ಹಿಂಸೆ ನೀಡಲಾಗಿದೆ ಎಂದು ಅಲ್ಲಿನ ದೃಶ್ಯಾವಳಿಗಳನ್ನು ವಿಡಿಯೋ ಮತ್ತು ಫೊಟೋ ಮೂಲಕ ಸೆರೆಹಿಡಿಯಲಾಗಿದ್ದು, ಪೆಟಾ ಇವುಗಳನ್ನು ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸಲ್ಲಿಸಿದೆ.