ಕಾನೂನು ಜಂಜಾಟದಲ್ಲಿ ಸಿಲುಕಿದೆ ಕರಾವಳಿಯ ಕಂಬಳ

ವಿಶೇಷ ವರದಿ

ಮಂಗಳೂರು : ಕರಾವಳಿ ಭಾಗದ ಸಾಂಪ್ರದಾಯಿಕ ಕ್ರೀಡೆ ಕಂಬಳದ ವಿರುದ್ಧದ ಪ್ರಕರಣವು ಕಳೆದ ಮೂರು ದಿನಗಳಲ್ಲಿ ಮೂರು ನ್ಯಾಯಾಲಯಗಳನ್ನು ಸುತ್ತಿ ಅಂತಿಮವಾಗಿ ಪ್ರಕರಣದ ವಿಚಾರಣೆ ಜನವರಿ 30ಕ್ಕೆ ಮುಂದೂಡಲಾಗಿದೆ.

ಮುಖ್ಯ ನ್ಯಾಯಮೂರ್ತಿ ಎಸ್ ಕೆ ಮುಖರ್ಜಿ ನೇತೃತ್ವದ ಹೈಕೋರ್ಟಿನ ವಿಭಾಗೀಯ ಪೀಠವು ಕಳೆದ ವರ್ಷದ ನವೆಂಬರ್ 22ರಂದು `ಪೆಟಾ’ ಸಂಸ್ಥೆಯ ಅರ್ಜಿಯೊಂದರ ವಿಚಾರಣೆ ನಡೆಸಿ ಕಂಬಳಕ್ಕೆ ತಡೆಯಾಜ್ಞೆ ಹೇರಿತ್ತು. ಜಲ್ಲಿಕಟ್ಟು ಪ್ರಕರಣದಲ್ಲಿನ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಕಂಬಳ ಉಲ್ಲಂಘಿಸುತ್ತಿದೆ ಎಂಬ ಆಧಾರದಲ್ಲಿ ಅದಕ್ಕೆ ತಡೆ ಕೋರಲಾಗಿತ್ತಲ್ಲದೆ ಪೆಟಾ ಸಂಘಟನೆಯ ಸಾರ್ವಜನಿಕ ಹಿತಾಸಕ್ತಿ ದಾವೆಯ ತೀರ್ಪು ಹೊರಬರುವ ತನಕ ಕಂಬಳ ಕ್ರೀಡೆ ನಡೆಸಬಾರದೆಂದು ಹೇಳಿತ್ತು. ಈ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಕೋರಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಕಂಬಳ ಸಮಿತಿ ನ್ಯಾಯಾಲಯದ ಮೆಟ್ಟಿಲೇರಿತ್ತು.

ಆದರೆ ಮುಖ್ಯ ಪೀಠ ಈ ಪ್ರಕರಣವನ್ನು ಜಸ್ಟಿಸ್ ಎಚ್ ಜಿ ರಮೇಶ್ ನೇತೃತ್ವದ ವಿಭಾಗೀಯ ಪೀಠಕ್ಕೆ ವರ್ಗಾಯಿಸಿದ್ದರೂ ಈ ಪೀಠ ಪ್ರಕರಣವನ್ನು ಇನ್ನೊಂದು ಪೀಠಕ್ಕೆ ವರ್ಗಾಯಿಸಿತ್ತು.

ಗುರುವಾರ ಈ ಪ್ರಕರಣ ಜಸ್ಟಿಸ್ ಅಬ್ದುಲ್ ನಝೀರ್ ನೇತೃತ್ವದ ವಿಭಾಗೀಯ ಪೀಠದ ಮುಂದೆ ಬಂದಿದ್ದರೂ ಜಸ್ಟಿಸ್ ನಝೀರ್ ಅವರು ಕಂಬಳ ಪ್ರಕರಣವನ್ನು 2015ರಲ್ಲಿ ಏಕ ನ್ಯಾಯಾಧೀಶ ಪೀಠದಲ್ಲಿ ವಿಚಾರಣೆ ನಡೆಸಿದ್ದರೆಂಬ ಕಾರಣಕ್ಕೆ ಹಾಗೂ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠ ಕಂಬಳಕ್ಕೆ ತಡೆಯಾಜ್ಞೆ ವಿಧಿಸಿರುವುದರಿಂದ ಈ ಪÀ್ರಕರಣವನ್ನು ಇನ್ನೊಂದು ಪೀಠಕ್ಕೆ ವರ್ಗಾಯಿಸಲು ಕೇಳಿತ್ತು.

ಅಂತೆಯೇ ಶುಕ್ರವಾರ ಕಂಬಳ ಸಮಿತಿಯ ಮಧ್ಯಂತರ ಅರ್ಜಿ ಜಸ್ಟಿಸ್ ಜಯಂತ್ ಎಂ ಪಟೇಲ್ ನೇತೃತ್ವದ ವಿಭಾಗೀಯ ಪೀಠದ ಮುಂದೆ ಬಂದಿತ್ತು. ಆದರೆ ಪ್ರಕರಣವನ್ನು ಪೆಟಾದ ಮುಖ್ಯ ಅರ್ಜಿಯೊಂದಿಗೆ ವಿಚಾರಣೆ ನಡೆಸುವುದಾಗಿ ಹೇಳಿ ವಿಚಾರಣೆಯನ್ನು ಜನವರಿ 30ಕ್ಕೆ ಮುಂದೂಡಲಾಯಿತು.

ಕಂಬಳ ಕ್ರೀಡೆಯಲ್ಲಿ ಪ್ರಾಣಿಗಳಿಗೆ ಹಿಂಸೆ ನೀಡಲಾಗುತ್ತಿದೆಯೇ ಎಂದು ಪರಿಶೀಲಿಸಲು ರಾಜ್ಯ ಸರಕಾರ ಪಶು ಸಂಗೋಪನಾ ಇಲಾಖೆಯ ಮುಖ್ಯ ಕಾರ್ಯದರ್ಶಿಯ ನೇತೃತ್ವದಲ್ಲಿ ಆರು ಮಂದಿ ಸದಸ್ಯರ ತಂಡವನ್ನು ರಚಿಸಿದ್ದರೂ ಸುಪ್ರೀಂ ಕೋರ್ಟಿನ ತಡೆಯಾಜ್ಞೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಂಬಳ ಆಯೋಜಿಸಿಲ್ಲವಾಗಿರುವುದರಿಂದ ತಂಡಕ್ಕೆ ತನ್ನ ಉದ್ದೇಶ ಈಡೇರಿಸಲು ಸಾಧ್ಯವಾಗಿಲ್ಲ ಎಂದು ಕಂಬಳ ಸಮಿತಿ ತನ್ನ ಮಧ್ಯಂತರ ಅರ್ಜಿಯಲ್ಲಿ ಹೇಳಿದೆ.

ಕರಾವಳಿ ಜಿಲ್ಲೆಗಳಲ್ಲಿ ನವೆಂಬರ್ ತಿಂಗಳಿನಿಂದ ಮಾರ್ಚ್ ತಿಂಗಳ ತನಕ ಕನಿಷ್ಠ ನಾಲ್ಕು ಡಜನ್ ಕಂಬಳಗಳು ನಡೆಯುತ್ತವೆ.