ಪಿಲಿಕುಳದಲ್ಲಿ ಈ ಬಾರಿ ನಡೆಯಲಿದೆ ಕಂಬಳ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಿಷೇಧದ ತೂಗುಕತ್ತಿಯಿಂದ ಓಲಾಡುತ್ತಿದ್ದ ಕಂಬಳಕ್ಕೆ ರಾಜ್ಯ ಸರಕಾರ ಸುಗ್ರೀವಾಜ್ಞೆ ಹೊರಡಿಸಿದ ಕಾರಣ ಕರಾವಳಿಯಲ್ಲಿ ಮತ್ತೆ ಈ ಬಾರಿ ಕಂಬಳದ ಕೋಣಗಳು ಓಡುವುದು ಬಹುತೇಕ ಖಚಿತವಾಗಿದೆ. ಅದರಲ್ಲೂ ಕರಾವಳಿ ಉತ್ಸವದ ಅಂಗವಾಗಿ ನಗರದ ಹೊರವಲಯದ ಪಿಲಿಕುಳ ನಿಸರ್ಗಧಾಮದಲ್ಲಿ ಜಿಲ್ಲಾಡಳಿತವೇ ಆಯೋಜನೆ ಮಾಡುವ ಗುತ್ತಿನ ಕಂಬಳವೂ ಈ ಬಾರಿ ನಡೆಯಲಿದೆ. ಕಂಬಳ ಆಯೋಜಿಸುವುದಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆ ನಡೆದಿದೆ.

ನಗರದಲ್ಲಿ ಈ ಬಾರಿ `ಕರಾವಳಿ ಉತ್ಸವ’ ಡಿಸೆಂಬರಿನಲ್ಲಿ ನಡೆಯಲಿದೆ. ಇದರ ಅಂಗವಾಗಿ ಪಿಲಿಕುಳದಲ್ಲಿ `ನೇತ್ರಾವತಿ-ಫಲ್ಗುಣಿ ಜೋಡುಕೆರೆ ಕಂಬಳ’ ಆಯೋಜನೆಗೆ ಜಿಲ್ಲಾಡಳಿತ ನಿರ್ಧಾರ ಕೈಗೊಂಡಿದೆ. ತುಳುವರ ಬದುಕಿನ ಅಂಗವಾಗಿರುವ ಕೃಷಿಯ ಜೊತೆಗೇ ಮಿಳಿತಗೊಂಡಿರುವ ಜಾನಪದ ಕ್ರೀಡೆ ಕಂಬಳ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡಿನಲ್ಲಿ ಆಯೋಜಿಸಲ್ಪಡುತ್ತಿದೆ. ಅದೆಷ್ಟೋ ಅದ್ದೂರಿ ಕಂಬಳಗಳು, ದೇವರ ಗದ್ದೆ ಕಂಬಳಗಳು ನಡೆಯುತ್ತಿವೆ. ಕಾಂಕ್ರೀಟ್ ಕಟ್ಟಡದ ನಾಡಾಗಿರುವ ನಗರದ ಕದ್ರಿ ಕಂಬಳವೂ ಅತ್ಯಂತ ಜನಪ್ರಿಯವಾದ ಕಂಬಳ.

ಪಿಲಿಕುಳ ನಿಸರ್ಗಧಾಮದಲ್ಲಿ 2014ರಲ್ಲಿ ಕೊನೆಯ ಬಾರಿಗೆ ಕಂಬಳ ನಡೆದಿತ್ತು. 2015ರಲ್ಲಿ ಕಂಬಳ ಆಯೋಜನೆಗೊಂಡಿರಲಿಲ್ಲ. 2016ರಲ್ಲಿ ಕಂಬಳದ ಮೇಲೆ ನಿಷೇಧ ಹೇರಿದ್ದ ಕಾರಣ ಕರಾವಳಿ ಭಾಗದಲ್ಲಿ ಎಲ್ಲೂ ಕಂಬಳ ನಡೆದಿರಲಿಲ್ಲ. ಅತ್ತ ತಮಿಳುನಾಡಿನ ಜಲ್ಲಿಕಟ್ಟು ಕ್ರೀಡೆಯನ್ನು ನಡೆಸಲು ಅನುಮತಿ ನೀಡುತ್ತಿದ್ದಂತೆ ಇತ್ತ ಕಂಬಳಕ್ಕೂ ಹಸಿರು ನಿಶಾನೆ ಸಿಗಲು ಹೋರಾಟ ತೀವ್ರಗೊಂಡಿತ್ತು. ಆಯೋಜಕರು ನ್ಯಾಯಾಲಯದ ಮೆಟ್ಟಲು ಹತ್ತಿದರು. ಕೊನೆಗೂ ಗ್ರೀನ್ ಸಿಗ್ನಲ್ ಸಿಕ್ಕೇ ಬಿಡ್ತು.

ಈ ಬಾರಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿರುವ ಹಿನ್ನೆಲೆಯಲ್ಲಿ ಕಂಬಳ ನಡೆಸಲು ಅವಕಾಶವಿದೆ. ಪಿಲಿಕುಳ ನಿಸರ್ಗಧಾಮದಲ್ಲಿ ಈ ಬಾರಿ ಕಂಬಳ ನಡೆಸುವ ಕುರಿತು ಜಿಲ್ಲಾಧಿಕಾರಿ ಕೆ ಜಿ ಜಗದೀಶ್ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಅದ್ಧೂರಿ ಕಂಬಳ ಆಯೋಜನೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರ ಜೊತೆ ಮಾತುಕತೆ ನಡೆಸಿದ ಬಳಿಕ ಅಂತಿಮ ತೀರ್ಮಾನ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ.