ಕಂಬಳ ನಿಷೇಧ ತೆರವು ಆಗ್ರಹಿಸಿ ಇಂದು ಸೀಎಂ ಭೇಟಿಯಾಗಲಿರುವ ನಿಯೋಗ

ಮಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿ ಕಂಬಳ ಸಮಿತಿಯು ಇಂದು (ನ 29) ಬೆಳಗಾವಿಯಲ್ಲಿ ಸೀಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ನಿರ್ದಿಷ್ಟ ಷರತ್ತುಗಳೊಂದಿಗೆ ಕಂಬಳ ನಡೆಸಬಹುದಾದ ಪ್ರಸಕ್ತ ಆದೇಶ ಪುನರ್ ಜಾರಿಗೆ ತರುವಂತೆ ಆಗ್ರಹಿಸಲು ನಿರ್ಧರಿಸಿದೆ.

ಮಿಯಾರುವಿನಲ್ಲಿ ಮೊನ್ನೆ ನಡೆದ ಸಮಿತಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸಮಿತಿ ಅಧ್ಯಕ್ಷ ಶಾಂತಾರಾಂ ಶೆಟ್ಟಿ ಹೇಳಿದರು. ಈ ಸಭೆಯಲ್ಲಿ 500ಕ್ಕೂ ಹೆಚ್ಚು ಮಂದಿ ಸೇರಿದ್ದರು. ಈ ಸಂದರ್ಭದಲ್ಲಿ ಹೈಕೋರ್ಟ್ ವಕೀಲ ರಾಜಶೇಖರ್ ಕಂಬಳದ ಬಗ್ಗೆ ಇರುವ ಕಾನೂನು ತೊಡಕುಗಳ ಬಗ್ಗೆ ವಿವರಿಸಿದರು.

“ನಾವು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮತ್ತು ದ ಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಕಾನೂನು ಸಚಿವ ಜಯಚಂದ್ರ ಹಾಗೂ ಪಶು ಸಂಗೋಪನಾ ಸಚಿವ ಮಂಜು ಉಪಸ್ಥಿತಿಯಲ್ಲಿ ಚರ್ಚಿಸಲಿದ್ದೇವೆ” ಎಂದು ಕಂಬಳ ತಜ್ಞ ಗುಣಪಾಲ ಕಡಂಬ ಸುದ್ದಿಗಾರರಲ್ಲಿ ತಿಳಿಸಿದರು.

‘ಕೋಣಗಳ ಅಂಗರಚನೆ ಓಟಕ್ಕೆ ಯೋಗ್ಯವಾಗಿಲ್ಲ’ ಎಂಬ ಅಧ್ಯಯನ ವರದಿಯನ್ನೂ ಈ ಸಂದರ್ಭದಲ್ಲಿ ಮಂಡಿಸಲಾಗುವುದು ಎಂದವರು ಹೇಳಿದರು.

ನಿರ್ದಿಷ್ಟ ಷರತ್ತುಗಳನ್ವಯ ಕಂಬಳಕ್ಕೆ ಅನುಮತಿ ನೀಡಲಾಗಿದ್ದ 2015 ಡಿಸೆಂಬರ್ 17ರಂದು ಮರುಪರಿಶೀಲನಾ ಆದೇಶ ನೀಡಲಾಗಿದ್ದರೂ, ಅದನ್ನು ಈಗ ಹಿಂದಕ್ಕೆ ಪಡೆಯಲಾಗಿದೆ. ಇದೀಗ ಈ ಆದೇಶ ಊರ್ಜಿತಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು.

ಈ ವಿಷಯದಲ್ಲಿ ಮೀಯಾರು ಸಭೆಯಲ್ಲಿ ಸರ್ವಾನುಮತದ ತೀರ್ಮಾನ ತೆಗೆದುಕೊಳ್ಳಲಾಯಿತು. ಸೀಎಂ ಸಭೆಯ ಬಳಿಕವೂ ನಮ್ಮ ಬೇಡಿಕೆಗೆ ಮಾನ್ಯತೆ ಸಿಗದಿದ್ದಲ್ಲಿ ಮಾತ್ರ ಮುಂದೆ ನಡೆಸಬೇಕಿರುವ ಪ್ರತಿಭಟನಾ ಕ್ರಮಗಳ ಬಗ್ಗೆ ರೂಪುರೇಷೆ ಹಾಕಿಕೊಳ್ಳಲಾಗುವುದು ಎಂದು ಕಡಂಬ ತಿಳಿಸಿದರು.

ಬೆಳಗಾವಿಯಲ್ಲಿ ಸೀಎಂ ಭೇಟಿಯಾಗಲಿರುವ ನಿಯೋಗದಲ್ಲಿ ಸಮಿತಿಯ ಅಧ್ಯಕ್ಷ, ಕಾರ್ಯದರ್ಶಿ ವಿಜಯಕುಮಾರ್ ಕಂಗಿನಮನೆ, ಗುಣಪಾಲ ಕಡಂಬ, ನವೀನ್‍ಚಂದ್ರ ಆಳ್ವ, ಸಾಂಪ್ರದಾಯಿಕ ಕಂಬಳ ಸಮಿತಿ ಅಧ್ಯಕ್ಷ ಸುಧಾಕರ ಶೆಟ್ಟಿ ಮತ್ತು ಕಾರ್ಯದರ್ಶಿ ಅಶೋಕ್ ಮಾಡಾ, ಸಮಿತಿ ಸದಸ್ಯರಾದ ಸುಧೀರ್ ಶೆಟ್ಟಿ, ಭಾಸ್ಕರ್ ಕೋಟ್ಯಾನ್, ಪ್ರಮೋದ್ ಶೆಟ್ಟಿ, ಸುಕುಮಾರ್ ಶೆಟ್ಟಿ ಮತ್ತು ಸಂಚಾಲಕ ಸೀತಾರಾಮ ಶೆಟ್ಟಿ ಒಳಗೊಳ್ಳಲಿದ್ದಾರೆ.

ಭಾರತ ‘ಪೇಟಾ’ ಸಲ್ಲಿಸಿದ ಅರ್ಜಿ ವಿಲೇವಾರಿವಾಗುವವರೆಗೆ ಎಲ್ಲ ಕಂಬಳ ಓಟಗಳನ್ನು ನಿಷೇಧಿಸಿ ಇತ್ತೀಚೆಗೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.