`ಶೀಘ್ರದಲ್ಲೇ ಕಂಬಳ ಕಾಯ್ದೆ ತಿದ್ದುಪಡಿ’

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ತುಳುನಾಡಿನ ಜಾನಪದ ಕ್ರೀಡೆ ಕಂಬಳಕ್ಕೆ ಹೇರಲಾಗಿರುವ ನಿಷೇಧವನ್ನು ರದ್ದು ಮಾಡಿ ಮತ್ತೆ ಅನುಮತಿ ನೀಡುವ ನಿಟ್ಟಿನಲ್ಲಿ ಎಲ್ಲಾ ಯತ್ನಗಳೂ ಸಾಗಿದ್ದು, ಪ್ರಸ್ತುತ ರಾಷ್ಟ್ರಪತಿಗಳ ಬಳಿ ಅಂಕಿತಕ್ಕಾಗಿ ಇರುವ ಕಂಬಳ ಕಾಯ್ದೆ ಮೇಲಿನ ನಿಷೇಧ ರದ್ದು ವಿಚಾರ ಶೀಘ್ರವೇ ಇತ್ಯಥ್ರ್ಯವಾಗಲಿದೆ ಎಂದು ಕೇಂದ್ರ ಸಚಿವ ಡೀವಿ ಸದಾನಂದ ಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಪ್ರಾಣಿ ನಿಷೇಧ ಕಾಯ್ದೆ 1960ರನ್ವಯ ಕಂಬಳ ಕ್ರೀಡೆಗೆ ನಿಷೇಧ ಹೇರಲಾಗಿತ್ತು. ಆದರೆ ಕಂಬಳ ಕ್ರೀಡೆ ತುಳುನಾಡಿನ ಸಾಂಪ್ರದಾಯಿಕ ಜಾನಪದ ಕ್ರೀಡೆಯಾಗಿದ್ದು, ಇದಕ್ಕೆ ನಿಷೇಧ ಸರಿಯಲ್ಲ ಎಂದು ನಾವು ಈಗಾಗಲೇ ರಾಷ್ಟ್ರಪತಿಗಳಿಗೆ ಮನವರಿಕೆ ಮಾಡಿದ್ದೇವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ರಾಜ್ಯದ ಕಾನೂನು ಕಾರ್ಯದರ್ಶಿಗಳೊಂದಿಗೆ ಒಂದು ಪ್ರತ್ಯೇಕ ಸಭೆಯೊಂದನ್ನು ಇಟ್ಟುಕೊಂಡಿದ್ದಾರೆ. ಅಲ್ಲದೆ ಸೋಮವಾರದಂದು ನವದೆಹಲಿಯಲ್ಲಿ ಕೇಂದ್ರದ ಕಾನೂನು ಸಚಿವಾಲಯದಲ್ಲೂ ಈ ಕುರಿತು ಇರುವ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ. ಕಂಬಳ ನಿಷೇಧ ರದ್ದು ವಿಚಾರಕ್ಕೆ ಸಂಬಂಧಿಸಿದಂತೆ ನಾನು ರಾಜ್ಯ ಸರಕಾರದ ಕಾರ್ಯವನ್ನು ಅಭಿನಂದಿಸುತ್ತೇನೆ” ಎಂದರು.