ಕಮಲಹಾಸನ್ಕೀಳು ನಟ

 ತ ನಾ ಸಚಿವರ ಆರೋಪ

ತಮಿಳು ನಟ ಕಮಲಹಾಸನ್ ವಿರುದ್ಧ ನಡೆಯುತ್ತಿರುವ ದಾಳಿಗೆ ಕೊನೆಯೇ ಇಲ್ಲವಾಗಿದೆ. ಕಳೆದ ವಾರ ಹಿಂದೂ ಮಕ್ಕಳ್ ಕಚ್ಚಿ ಪಕ್ಷ ಕಮಲಹಾಸನ್ ನಡೆಸಿಕೊಡುವ ಬಿಗ್ ಬಾಸ್ ಕಾರ್ಯಕ್ರಮವನ್ನು ನಿಷೇಧಿಸಲು ಆಗ್ರಹಿಸಿದ್ದು, ಈ ಕಾರ್ಯಕ್ರಮದಲ್ಲಿ ತಮಿಳು ಸಂಸ್ಕøತಿಯನ್ನು ಅವಹೇಳನ ಮಾಡಲಾಗುತ್ತಿದೆ ಎಂದು ಆರೋಪಿಸಿತ್ತು. ಈಗ ತಮಿಳುನಾಡಿನ ಹಲವು ಸಚಿವರು ಕಮಲಹಾಸನ್ ವಿರುದ್ಧ ಆಕ್ರಮಣ ನಡೆಸಿದ್ದಾರೆ. ಕಮಲಹಾಸನ್ ಲಿವ್-ಇನ್ ಸಂಬಂಧ ಇಟ್ಟುಕೊಳ್ಳುವ ಮೂಲಕ ಭಾರತೀಯ ಮತ್ತು ತಮಿಳು ಸಂಸ್ಕøತಿಯ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಕಾನೂನು ಸಚಿವ ಸಿ ವಿ ಷಣ್ಮುಗಂ ಅರೋಪಿಸಿದ್ದಾರೆ. ಮತ್ತೊಬ್ಬ ಪುರಸಭಾ ಆಡಳಿತ ಸಚಿವ ಎಸ್ ಪಿ ವೇಲುಮಣಿ ಕಮಲಹಾಸನ್ ಅವರ ಆದಾಯ ತೆರಿಗೆ ದಾಖಲೆಗಳನ್ನು ತನಿಖೆಗೆ ಒಳಪಡಿಸುವುದಾಗಿ ಹೇಳಿದ್ದಾರೆ.

ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಕಮಲಹಾಸನ್ ಹೇಳಿರುವುದು ಈ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ. ಹಣ ಸಂಪಾದಿಸಲು ಪರದಾಡುತ್ತಿರುವ ಕಮಲಹಾಸನಗೆ ಈ ರೀತಿ ಹೇಳಿಕೆ ನೀಡುವ ಹಕ್ಕಿಲ್ಲ ಎಂದು ಆರೋಪಿಸಿರುವ ಸಚಿವರು, “ಕಮಲಹಾಸನ್ ಒಬ್ಬ ತೃತೀಯ ದರ್ಜೆಯ ಕೀಳುಮಟ್ಟದ ನಟ” ಎಂದು ಬಣ್ಣಿಸಿದ್ದಾರೆ. ಹಣಕ್ಕಾಗಿ ಏನು ಮಾಡಲೂ ಸಿದ್ಧವಾಗಿರುವ ಕಮಲಹಾಸನ್ ಅವರ ಬಿಗ್ ಬಾಸ್ ಪ್ರದರ್ಶನಕ್ಕಾಗಿ ಅವರನ್ನು ಬಂಧಿಸಬೇಕು ಎಂದು ಷಣ್ಮುಗಂ ಆಗ್ರಹಿಸಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮವನ್ನು ಹಣ ಸಂಪಾದನೆಗಾಗಿ ನಡೆಸುತ್ತಿದ್ದು ಕೆಳ ಜಾತಿಯವರ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಲಾಗುತ್ತಿದೆ. ಹಾಗಾಗಿ ಎಸ್ಸಿ/ಎಸ್ಟಿ ದೌರ್ಜನ್ಯ ಪ್ರತಿಬಂಧ ಕಾಯ್ದೆಯಡಿ ಮೊಕದ್ದಮೆ ದಾಖಲಿಸಬೇಕು ಎಂದು ಷಣ್ಮುಗಂ ಆಗ್ರಹಿಸಿದ್ದಾರೆ. ಸರ್ಕಾರದಲ್ಲಿ ಭ್ರಷ್ಟಾಚಾರ ಇದೆ ಎಂದು ಹೇಳಲು ಕಮಲಹಾಸನ್ ಬಳಿ ಯಾವ ಪುರಾವೆ ಇದೆ ಎಂದು ಪ್ರಶ್ನಿಸಿರುವ ಸಚಿವ ವೀರಮಣಿ, ಈ ನಟ ತನ್ನ ತೆರಿಗೆಯನ್ನು ಸರಿಯಾಗಿ ಪಾವತಿಸಲಾಗಿದೆಯೇ ಎಂದು ಪರಿಶೀಲಿಸಲಾಗುತ್ತದೆ ಎಂದು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕಮಲಹಾಸನ್ ಸಾರ್ವಜನಿಕ ವಿಚಾರಗಳಲ್ಲಿ ಮುಕ್ತವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಸಾಮಾಜಿಕ ತಾಣಗಳಲ್ಲೂ ತಮ್ಮ ಹೇಳಿಕೆ ನೀಡುತ್ತಿದ್ದಾರೆ. ಆದರೆ ಕೆಲವು ದಿನಗಳಿಂದ ನಟನ ಹೇಳಿಕೆಗಳು ತೀವ್ರ ಟೀಕೆಗೊಳಗಾಗಿವೆ. ಕೇರಳದಲ್ಲಿ ಅತ್ಯಾಚಾರಕ್ಕೊಳಗಾದ ಸಿನಿಮಾ ನಟಿಯ ಹೆಸರನ್ನು ಉಲ್ಲೇಖಿಸಿದ ಪ್ರಕರಣದಲ್ಲೂ ಕಮಲಹಾಸನ್ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಕಮಲಹಾಸನ್ ಗಂಭೀರವಾಗಿ ಪರಿಗಣಿಸಬೇಕಾದ ಒಬ್ಬ ವ್ಯಕ್ತಿಯೇ ಅಲ್ಲ ಎಂದು ಉನ್ನತ ಶಿಕ್ಷಣ ಸಚಿವ ಕೆ ಪಿ ಅನ್ಬಳಗನ್ ಹೀಯಾಳಿಸಿದ್ದಾರೆ.