`ಒಬ್ಬ ಕಲ್ಲಡ್ಕ ಭಟ್ ಹೋದ್ರೆ ಹತ್ತು ಮಂದಿ ಹುಟ್ಟಿ ಬರ್ತಾರೆ’

ಕಲ್ಲಡ್ಕ ಪ್ರಭಾಕರ ಭಟ್ ಸಂದರ್ಶನ

ಹಿರಿಯ ಆರೆಸ್ಸೆಸ್ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದ್ದೇ ಇರುತ್ತಾರೆ. ಸದ್ಯ ಆರೆಸ್ಸೆಸ್ಸಿನ ಕ್ಷೇತ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿರುವ ಕಲ್ಲಡ್ಕ ಭಟ್ ಅವರು ಸಂಘ ಪರಿವಾರ ಸಂಘಟನೆಗಳ ಮೇಲೆ ಸಾಕಷ್ಟು ಪ್ರಭಾವ ಬೀರಬಲ್ಲವರು ಹಾಗೂ ಅವರ ಮಾತುಗಳಿಗೆ ಪರಿವಾರ ಕಾರ್ಯಕರ್ತರು ಭಾರೀ ಮನ್ನಣೆ ನೀಡುತ್ತಾರೆಂಬುದು ನಿರ್ವಿವಾದಿತ. ಪ್ರಚೋದನಾತ್ಮಕ ಭಾಷಣಗಳನ್ನು ನೀಡುತ್ತಾರೆಂಬ ಆರೋಪವನ್ನು ಅವರು ಹಲವು ಬಾರಿ ಎದುರಿಸಿದವರು. ಇತ್ತೀಚಿಗಿನ ಬಂಟ್ವಾಳ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಅವರನ್ನು ಮಾತನಾಡಿಸಿದಾಗ. 

 • ಬಂಟ್ವಾಳ ಮೇ 28ರಿಂದ ಉದ್ವಿಗ್ನತೆಯಿಂದ ಕೂಡಿತ್ತು. ಇದಕ್ಕೆ ಕಾರಣ ?

ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರ ಓಲೈಕೆ ರಾಜಕಾರಣವೇ ಇದರ ಹಿಂದಿನ ಏಕೈಕ ಕಾರಣ. ಒಂದು ವರ್ಗವನ್ನು ಓಲೈಸಿ ಅಧಿಕಾರ ಪಡೆಯುವ ಉದ್ದೇಶ ಅವರದ್ದು. ಅವರು ಮೊದಲು ಶಾಸಕರಾಗಿದ್ದಂದಿನಿಂದಲೂ ಹೀಗೆಯೇ ಮಾಡುತ್ತಾ ಬಂದವರು. ಮುಸ್ಲಿಮರ ವಿರುದ್ಧ ಯಾವುದೇ ಪ್ರಕರಣಗಳಿದ್ದರೂ ಅವರೇ ಸ್ವತಹ ಹೋಗಿ ಆರೋಪಿಗಳನ್ನು ಠಾಣೆಯಿಂದ ಬಿಡಿಸಿ ತರುತ್ತಾರೆ. ರೈ ಬೆಂಬಲವಿದ್ದರೆ ತಾವು ಏನನ್ನು ಮಾಡಿದರೂ ಸಮಸ್ಯೆಗೀಡಾಗುವುದಿಲ್ಲ ಎಂಬ ಭಾವನೆ ಮುಸ್ಲಿಮರಲ್ಲಿ ಬೆಳೆದು ಬಂದಿದೆ.

 • ಆದರೆ ನೀವು ಕೂಡ ಪೊಲೀಸರ ಮೇಲೆ ಪ್ರಭಾವ ಬೀರಿ ದುಷ್ಕರ್ಮಿ ಹಿಂದೂಗಳನ್ನು ರಕ್ಷಿಸುತ್ತೀರಿ ಎಂಬ ಆರೋಪವಿದೆಯಲ್ಲ ?

ಇಲ್ಲ, ಅವರ ಹಾಗೆ ನಾನು ಯಾವತ್ತೂ ಮಾಡಿಲ್ಲ. ನಮ್ಮ ಹುಡುಗರ ಬಂಧನವಾದರೆ ನಾವು ಠಾಣೆಗೆ ಹೋಗುತ್ತೇವೆಂಬುದು ನಿಜ. ಆದರೆ ಪೊಲೀಸರ ಕರ್ತವ್ಯ ನಿರ್ವಹಣೆಯಲ್ಲಿ ಹಸ್ತಕ್ಷೇಪ ನಡೆಸುವುದಿಲ್ಲ. ಆರೋಪಿಗಳಿಗೆ ಹಿಂಸೆ ನೀಡದಂತೆ ಮನವಿ ಮಾಡುತ್ತೇವೆ. ಕಾನೂನು ತನ್ನ ಹಾದಿ ಹಿಡಿಯಲು ಸಹಕರಿಸುತ್ತೇವೆ.

 • ಬಂಟ್ವಾಳದಲ್ಲಿ ನಿಷೇಧಾಜ್ಞೆಯಿರುವ ಹೊರತಾಗಿಯೂ ನೀವು ಹಾಗೂ ಸಂಘ ಪರಿವಾರ ನಾಯಕರು ಬಿ ಸಿ ರೋಡಿನಲ್ಲಿ ಪ್ರತಿಭಟನೆ ನಡೆಸಿದ್ದೇಕೆ ?

ಬಂಟ್ವಾಳದ ಘಟನೆಗಳಿಂದ ನೊಂದಿದ್ದ ನಾವು ನಿಷೇಧಾಜ್ಞೆ ತೆರವುಗೊಂಡ ನಂತರ ಪ್ರತಿಭಟಿಸಲು ನಿರ್ಧರಿಸಿದ್ದೆವು. ನಿಷೇಧಾಜ್ಞೆ ಅವಧಿ ವಿಸ್ತರಿಸಿದ್ದರಿಂದ ಎರಡು ಬಾರಿ ಪ್ರತಿಭಟನೆ ಮುಂದೂಡಿದ್ದೆವು. ಆದರೆ ನಮಗೆ ಪ್ರತಿಭಟಿಸಲು ಅವಕಾಶ ನೀಡಲು ಅವರಿಗೆ ಮನಸ್ಸಿರಲಿಲ್ಲವೆಂದು ತಿಳಿದು ನಾವು ಪ್ರತಿಭಟಿಸಲು ನಿರ್ಧರಿಸಿದೆವು. ಸುಮಾರು 3000 ಮಂದಿ ಭಾಗವಹಿಸಿದ್ದರೂ ಯಾರೂ ಹಿಂಸೆಯಲ್ಲಿ ತೊಡಗಲಿಲ್ಲ. ನಿಷೇಧಾಜ್ಞೆ ಉಲ್ಲಂಘಿಸಿರುವುದು ತಪ್ಪು ಹೌದು, ಆದರೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರಂತೆ ನಾವು ನಮ್ಮ `ಧರ್ಮ’ ಪಾಲಿಸಿದ್ದೇವೆ.

 • ಬಂಟ್ವಾಳದ ಪೊಲೀಸ್ ಅಧಿಕಾರಿಗಳು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆಯೇ ?

ಹೌದು. ಅವರಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಬಿಡಲಾಗುತ್ತಿಲ್ಲ. ಅವರು ಜಿಲ್ಲಾ ಉಸ್ತುವಾರಿ ಸಚಿವರ ತಾಳಕ್ಕೆ ತಕ್ಕಂತೆ ಕುಣಿಯುತ್ತಾರೆ.

 • ಶರತ್ ಹತ್ಯೆಗೆ ಮತೀಯ ದ್ವೇಷ ಕಾರಣವೇ ?

ಶರತ್ ಅವರು ಆರೆಸ್ಸೆಸ್ ಕಾರ್ಯಕರ್ತರಾಗಿದ್ದುಕೊಂಡು ಸಮಾಜಸೇವೆಯಲ್ಲಿ ತೊಡಗಿದ್ದರು. ಅವರಿಗೆ ಯಾವುದೇ ವೈರಿಗಳಿರಲಿಲ್ಲ. ತನ್ನನ್ನು ಯಾರೋ ಹಿಂಬಾಲಿಸುತ್ತಿದ್ದಾರೆಂದು ಕೊಲೆಯಾಗುವ ಸ್ವಲ್ಪ ದಿನಗಳ ಹಿಂದೆ ಆತ ತನ್ನ ಆತ್ಮೀಯರೊಬ್ಬರಲ್ಲಿ ಹೇಳಿಕೊಂಡಿದ್ದರು. ಆದರೆ ಇದನ್ನು ಆತ ಯಾ ಆತನ ಸ್ನೇಹಿತ ಗಂಭೀರವಾಗಿ ಪರಿಗಣಿಸಲಿಲ್ಲ. ಆತ ಖಂಡಿತವಾಗಿಯೂ ಮತೀಯ ದ್ವೇಷಕ್ಕೆ ಬಲಿಯಾದ.

 • ಶಾಂತಿ ಸಭೆಯನ್ನು ಬಿಜೆಪಿ ಮತ್ತು ಹಿಂದು ಸಂಘಟನೆಗಳು ಬಹಿಷ್ಕರಿಸಿದ್ದೇಕೆ ?

ಕಲ್ಲಡ್ಕದಲ್ಲಿ ಆರಂಭಧಲ್ಲಿ ಉದ್ವಿಗ್ನತೆ ಇದ್ದಾಗಲೇ ಶಾಂತಿ ಸಭೆ ನಡೆಸಬೇಕಿದ್ದರೂ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದ್ದಾಗ ಶಾಂತಿ ಸಭೆ ನಡೆಸಲಾಯಿತು. ನನ್ನನ್ನು ಯಾ ಬೇರೆ ಯಾವುದೇ ಹಿರಿಯ ಆರೆಸ್ಸೆಸ್ ನಾಯಕರನ್ನು ಆಹ್ವಾನಿಸಲಾಗಿರಲಿಲ್ಲ. ಬಿಜೆಪಿ ಅಧ್ಯಕ್ಷರು ಹಾಗೂ ಕೆಲ ನಾಯಕರನ್ನು ಮಾತ್ರ ಆಹ್ವಾನಿಸಲಾಗಿತ್ತು.

 • ಮುಸ್ಲಿಮರು ಸಮಸ್ಯೆ ಸೃಷ್ಟಿಸುತ್ತಿದ್ದಾರೆಂದು ಆರೋಪಿಸಬಹುದು ಆದರೆ ಹಿಂದೂಗಳು ನಡೆಸಿದ ದಾಳಿಗಳ ಬಗ್ಗೆ ಏನಂತೀರಿ ?

ಹಿಂದೂಗಳು ಯಾವತ್ತೂ ಮೊದಲು ದಾಳಿ ನಡೆಸಿಲ್ಲ. ವಿರೋಧಿ ಕಡೆಯಿಂದ ನಡೆದ ಕೃತ್ಯಕ್ಕೆ ನಾವು ಪ್ರತಿಕ್ರಿಯಿಸುತ್ತೇವೆ. ಹಿಂದೂಗಳು ಮುಸ್ಲಿಮರ ಮೇಲೆ ಮೊದಲು ದಾಳಿ ನಡೆಸಿದ ಉದಾಹರಣೆ ಈ ಪ್ರದೇಶದಲ್ಲಿ ಇಲ್ಲ. ಕಲ್ಲಡ್ಕದಲ್ಲಿ ಶೇ 65ರಷ್ಟು ಮುಸ್ಲಿಮರಿದ್ದಾರೆ. ಹಿಂದೂಗಳು ಅವರ ಮೇಲೆ ಮೊದಲು ದಾಳಿ ನಡೆಸಿದ್ದಾರೆಂದು ಯಾರಾದರೂ ಹೇಳಲಿ. ಆದರೆ ನಮ್ಮ ಮೇಲೆ ದಾಳಿ ನಡೆದಾಗಲೆಲ್ಲಾ ನಾವು ಯಾವತ್ತೂ ಸುಮ್ಮನೆ ಕುಳಿತಿಲ್ಲ. ನಮ್ಮನ್ನು ರಕ್ಷಿಸಬೇಕಾದವರಿಗೆ ರಕ್ಷಣೆ ನೀಡಲು ಅಸಾಧ್ಯವೆಂದರೆ ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕು.

 • ಪ್ರಚೋದನಾತ್ಮಕ ಭಾಷಣಗಳು  ಉದ್ವಿಗ್ನತೆಗೆ ಕಾರಣವೆನ್ನಲಾಗುತ್ತಿದೆಯಲ್ಲ ?

ಇನ್ನೊಬ್ಬರ ಮೇಲೆ ದಾಳಿ ನಡೆಸುವಂತೆ ನಮ್ಮ ಯುವಕರಿಗೆ ನಾನು ಹೇಳುವುದಿಲ್ಲ. ನಾನು ಹಿಂಸೆಯನ್ನು ಬೆಂಬಲಿಸುವುದಿಲ್ಲ. ಆದರೆ ಅವರ ಮೇಲೆ ದಾಳಿ ನಡೆದಾಗ ಸುಮ್ಮನಿರಲು ಅವರಿಗೆ ಹೇಳಲು ಸಾಧ್ಯವಿಲ್ಲ.

 • ಪ್ರತಿ ಬಾರಿ ಜಿಲ್ಲೆಯಲ್ಲಿ ಮತೀಯ ಉದ್ವಿಗ್ನತೆ ಕಾಡಿದಾಗಲೂ ನಿಮ್ಮ ಹೆಸರು ಕೇಳಿ ಬರುತ್ತಿರುವುದೇಕೆ ?

ನಾನೊಬ್ಬ ಹಿರಿಯ ಆರೆಸ್ಸೆಸ್ ನಾಯಕ ಹಾಗೂ ನನ್ನ  ಮಾತುಗಳು ನೇರವಾಗಿರತ್ತವೆ. ಕೆಲವರಿಗೆ ಇದು ಇಷ್ವಾಗುವುದಿಲ್ಲ. ಅವರು ನನ್ನನ್ನು ಬಂಧಿಸಿದರೆ ಆರೆಸ್ಸೆಸ್ ದುರ್ಬಲಗೊಳ್ಳಬಹುದೆಂದು ತಿಳಿದುಕೊಂಡಿದ್ದಾರೆ. ಆದರೆ ನಮ್ಮ ಸಂಘಟನೆ ಯಾವುದೇ ಒಬ್ಬ ವ್ಯಕ್ತಿಯ ಮೇಲೆ ಅವಲಂಬಿತವಾಗಿಲ್ಲ. ಒಬ್ಬ ಕಲ್ಲಡ್ಕ ಭಟ್ ಹೋದರೆ, ಹತ್ತು ಮಂದಿ ಹುಟ್ಟಿ ಬರುತ್ತಾರೆ. ನನ್ನನ್ನು ಬಂಧಿಸಿದರೆ ಇಲ್ಲವೇ ಕೊಂದು ಬಿಟ್ಟರೆ ಆರೆಸ್ಸೆಸ್ ಸಂಘಟನೆಯ ಬಾಯಿ ಮುಚ್ಚಿಸಬಹುದೆಂದು ತಿಳಿಯುವುದು ಮೂರ್ಖತನ.

 • ಆರೆಸ್ಸೆಸ್ಸಿನ ನೇತೃತ್ವ ಬ್ರಾಹ್ಮಣರದ್ದಾದರೂ ಅಂತಿಮವಾಗಿ  ಹಿಂದುಳಿದ ವರ್ಗಗಳಿಗೆ ಸೇರಿದ ಕಾರ್ಯಕರ್ತರು ಜೈಲು ಸೇರುತ್ತಾರೆ ಎಂಬ ಮಾತಿದೆಯಲ್ಲ ?

ಆರಂಭದಲ್ಲಿ ಆರೆಸ್ಸೆಸ್ಸಿನಲ್ಲಿ ಸಾಕಷ್ಟು ಮಂದಿ ಬ್ರಾಹ್ಮಣರು ಹಾಗೂ ಮೇಲ್ಜಾತಿಯವರಿದ್ದರು. ಆದರೆ ವರ್ಷ ಕಳೆದ ಹಾಗೆ  ಎಲ್ಲಾ ವರ್ಗಗಳವರೂ ಇದ್ದಾರೆ. ನಮ್ಮ ಪ್ರಾಂತ್ಯದಲ್ಲಿ ಬಿಲ್ಲವರು ಬಹುಸಂಖ್ಯಾತರಾಗಿರುವುದರಿಂದ ನಮ್ಮ ಸಂಘಟನೆಯಲ್ಲೂ ಅವರ ಸಂಖ್ಯೆ ಹೆಚ್ಚಿದೆ.

 • ಹಿಂದುತ್ವದ ಮೇಲೇಕೆ ಅಷ್ಟೊಂದು ಒತ್ತು ನೀಡುತ್ತೀರಿ ?

ಅದರಲ್ಲಿ ತಪ್ಪೇನಿದೆ ? ನಮ್ಮ ಜನಪ್ರತಿನಿಧಿಗಳು ಮುಸ್ಲಿಂ ಮತ್ತು ಕ್ರೈಸ್ತ ಸಂಘಟನೆಗಳ ಕಾರ್ಯಕ್ರಮಕ್ಕೂ ಹೋಗುತ್ತಾರೆ. ಆದರೆ ನಮ್ಮ ಶಾಲೆಯ ಕಾರ್ಯಕ್ರಮಕ್ಕೆ ರಮಾನಾಥ ರೈ ಅವರನ್ನು ಎರಡು ಬಾರಿ ಆಹ್ವಾನಿಸಿದ್ದರೂ ಅವರು ಬಾರದೇ ಇದ್ದುದರಿಂದ ಅವರನ್ನು ಆಹ್ವಾನಿಸುವುದನ್ನು ನಿಲ್ಲಿಸಿದ್ದೇನೆ. (ಕೃಪೆ : ಡಿಸಿ)