ಕಲ್ಲಡ್ಕ ಶಾಲೆಗೆ ನೀಡಿದ್ದ ಅನುದಾನ ರದ್ದು ಸಮರ್ಥಿಸಿಕೊಂಡ ಧಾರ್ಮಿಕ ಪರಿಷತ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕಲ್ಲಡ್ಕ ಪ್ರಭಾಕರ ಭಟ್ ಅವರ ಆಡಳಿತಕ್ಕೆ ಒಳಪಟ್ಟ ಶಾಲೆಗಳಿಗೆ ಧಾರ್ಮಿಕ ದತ್ತಿ ಇಲಾಖೆಯಿಂದ ನೀಡಲಾಗುತ್ತಿದ್ದ ಅನುದಾನವನ್ನು ರದ್ದುಗೊಳಿಸಿರುವ ರಾಜ್ಯ ಸರಕಾರದ ಕ್ರಮವನ್ನು ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಬಲವಾಗಿ ಸಮರ್ಥಿಸಿಕೊಂಡಿದೆ.

ಕೊಲ್ಲೂರು ದೇವಾಲಯದಿಂದ ಕಲ್ಲಡ್ಕದ ಎರಡು ಶಾಲೆಗಳಿಗೆ ನೀಡಲಾಗುತ್ತಿದ್ದ ಮಧ್ಯಾಹ್ನದ ಬಿಸಿಯೂಟದ ಅನುದಾನವನ್ನು ರದ್ದುಗೊಳಿಸಿರುವ ಕ್ರಮವನ್ನು ಖಂಡಿಸಿ ಶುಕ್ರವಾರದಂದು ವಿದ್ಯಾರ್ಥಿಗಳು ಬಟ್ಟಲು ಬಡಿದು ಭಾರೀ ಪ್ರತಿಭಟನೆಯನ್ನು ನಡೆಸಿದ್ದರು. ಈ ಅನುದಾನವನ್ನು ಮತ್ತೆ ಶಾಲೆಗೆ ನೀಡಬೇಕೆಂದು ಆಗ್ರಹವನ್ನು ಮುಂದಿಟ್ಟಿದ್ದರು.

ಸಕ್ರ್ಯೂಟ್ ಹೌಸ್‍ನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಪರಿಷತ್ ಪ್ರಮುಖರಾದ ಜಗನ್ನಿವಾಸ ರಾವ್, ರಾಜ್ಯದ ಅನೇಕ ಶಾಲೆಗಳಿಗೆ ಧಾರ್ಮಿಕ ದತ್ತಿ ಇಲಾಖೆ ಅಧೀನದ ದೇವಸ್ಥಾನಗಳಿಂದ ಕಾನೂನುಬಾಹಿರವಾಗಿ ಅನುದಾನವನ್ನು ನೀಡಲಾಗುತ್ತಿದ್ದು, ಅದನ್ನು ನಿಲ್ಲಿಸಲು ನಿರ್ಧಾರ ಕೈಗೊಳ್ಳಲಾಗಿತ್ತು. ಧಾರ್ಮಿಕ ದತ್ತಿ ಇಲಾಖೆ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಅನುದಾನವನ್ನು ರದ್ದು ಮಾಡಲಾಗಿದೆ. ಕಲ್ಲಡ್ಕದ ಶ್ರೀರಾಮ ಶಾಲೆಗೆ 2.34 ಕೋಟಿ ರೂ ಮತ್ತು ಪುಣಚದ ಶ್ರೀ ದೇವಿ ಶಾಲೆಗೆ 50 ಲಕ್ಷ ರೂ ನೀಡಿರುವುದು ಕಾನೂನಿನ ಉಲ್ಲಂಘನೆಯಾಗಿರುವ ಹಿನ್ನೆಲೆಯಲ್ಲಿ ಈ ಅನುದಾನವನ್ನು ರದ್ದುಪಡಿಸಲಾಗಿದೆ ಎಂದರು.

ಕೇವಲ ಇವರೆಡು ಶಾಲೆಗಳಷ್ಟೇ ಅಲ್ಲದೇ ಜಿಲ್ಲೆಯ ಇನ್ನೂ ಹಲವು ಶಾಲೆಗಳ ಅನುದಾನ ರದ್ದು ಮಾಡಲಾಗಿದೆ. ಭಾರತಿ ಹಿ ಪ್ರಾ ಶಾಲೆ ಕಬಕ, ಸುಳ್ಯ ಮತ್ತು ಬಿಳಿಮಲೆ ಶಾಲೆಗಳು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿ ಪ್ರಾ ಶಾಲೆ ಸುಬ್ರಹ್ಮಣ್ಯ ಕೂಡ ದೇವಸ್ಥಾನದಿಂದ ಅನುದಾನವನ್ನು ಪಡೆದುಕೊಳ್ಳುತ್ತಿದ್ದು ಅದನ್ನು ನಿಲ್ಲಿಸಲಾಗಿದೆ ಎಂದರು.

“ವೈಯಕ್ತಿಕ ನೆಲೆಯಲ್ಲಿ ಟ್ರಸ್ಟ್‍ನಡಿಯಲ್ಲಿ ನಡೆಯುವ ವಿದ್ಯಾ ಸಂಸ್ಥೆಗಳು ತಮ್ಮದೇ ಅನುದಾನವನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ಬಿಸಿಯೂಟವನ್ನು ಕೊಡಬೇಕು. ದೇವಾಲಯದ ಅನುದಾನದ ಅಗತ್ಯವಿಲ್ಲ” ಎಂದು ರಾವ್ ಸರಕಾರದ ಕ್ರಮವನ್ನು ಸಮರ್ಥಿಸಿಕೊಂಡರು.