ಪತ್ನಿ-ಮಕ್ಕಳೆದುರೇ ಮುತ್ತಲಿಬ್ ಕೊಲೆ

ಉಪ್ಪಳ ಮಣಿಮುಂಡ ನಿವಾಸಿ ಶೇಖ್ ಮೊಯ್ದಿನರ ಮಗ ಕಾಲಿಯಾ ರಫೀಕ್ ಅನೇಕ ಗ್ಯಾಂಗ್ ವಾರುಗಳಲ್ಲಿ ಭಾಗಿಯಾಗಿದ್ದ. ತನ್ನದೇ ಗುಂಪು ಕಟ್ಟಿಕೊಂಡಿದ್ದ. ಮಣಿಮುಂಡದಲ್ಲಿ ಕಾಲಿಯಾನನ್ನು ಈತನ ಸಂಬಂಧಿಕರು, ಸಾರ್ವಜನಿಕರು ಭಾಯ್ ಎಂದೇ ಕರೆಯುತ್ತಿದ್ದರು.

2013ರ ಅಕ್ಟೋಬರ್ 24ನೇ ತಾರೀಖಿನ ರಾತ್ರಿ ರಫಿಕ್ ಮತ್ತು ಈತನ 5 ಜನ ಸಹಚರರು ಉಪ್ಪಳ ಪೇಟೆಯಿಂದ ಮಣ್ಣಂಗುಯಿಯ ಮುತ್ತಲಿಬ್ ಎಂಬವರ ಮನೆಗೆ ತೆರಳಿ ಮುತ್ತಲಿಬನನ್ನು ಆತನ ಹೆಂಡತಿ ಮಕ್ಕಳು ನೋಡುತ್ತಿದ್ದಂತೆಯೇ ಮನೆಯೆದುರೇ ಗುಂಡಿಕ್ಕಿ ಕೊಂದಿದ್ದ. ಈ ಪ್ರಕರಣದಲ್ಲಿ ಪ್ರಥಮ ಆರೋಪಿಯಾಗಿದ್ದ ಕಾಲಿಯಾನನ್ನು ಕೋರ್ಟಿಗೆ ಹಾಜರು ಪಡಿಸುವಾಗಲೇ ಮುತ್ತಲಿಬ್ ಸಂಬಂಧಿ ಕಸಾಯಿ ಅಲಿ ಕೋರ್ಟ್ ಆವರಣದಲ್ಲೇ ಕಾಲಿಯಾನನ್ನು ಕೊಲ್ಲಲು ಪ್ರಯತ್ನಿಸಿದ್ದ.

ನಂತರ ಕಳೆದ ಮೂರು ವರ್ಷಗಳಿಂದ ಕಸಾಯಿ ಆಲಿ ಕಾಲಿಯಾನನ್ನು ಮುಗಿಸಲು ಸ್ಕೆಚ್ ಹಾಕುತ್ತಲೇ ಇದ್ದು, ಮುತ್ತಲಿಬ್ ತಮ್ಮ ನೂರ್ ಅಲಿ ಕೂಡಾ ಅಣ್ಣನ ಕೊಲೆಯ ಪ್ರತೀಕಾರಕ್ಕೆ ಸಾಥ್ ನೀಡಿದ್ದ. ವರ್ಷದ ಹಿಂದಷ್ಟೇ ಕಾಲಿಯಾ ಮತ್ತು ನೂರ್ ಅಲಿ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಇದರಿಂದ ಇಬ್ಬರ ಕಾಲುಗಳಿಗೆ ಗುಂಡಿ ತಗುಲಿತ್ತು. ಇದರ ಮುಂದುವರಿದ ಭಾಗವಾಗಿ ಕಾಲಿಯಾ ಕೊಲೆ ನಡೆದಿದೆ ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ.

ಮಂಗಳೂರಲ್ಲೂ ಕಾಲಿಯಾ ರೌಡಿಸಂ

ಮಂಗಳೂರಿನ ಪಾಂಡೇಶ್ವರ ಠಾಣೆಯಲ್ಲೂ ಕಾಲಿಯಾ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಈತ ಇಲ್ಲಿ ರೌಡಿಶೀಟರ್ ಕೂಡ. ಉಳ್ಳಾಲ ಠಾಣಾ ವ್ಯಾಪ್ತಿಯ ತಲಪಾಡಿಯ ನಿವೃತ್ತ ಅಧಿಕಾರಿ ಕೇಶವ ಎಂಬವರ ಮನೆ ಬಾಗಿಲಿಗೆ 2013ರಲ್ಲಿ ಗುಂಡಿಕ್ಕಿ ಬೆದರಿಸಿದ ಪ್ರಕರಣದ ಆರೋಪಿಯಾಗಿದ್ದಾನೆ. ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳವು ಪ್ರಕರಣದಲ್ಲಿ ಸೆರೆಯಾಗಿದ್ದ. ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಉಪ್ಪಳ ನಿವಾಸಿ ಹಮೀದ್ ಎಂಬವನನ್ನು ಪೆಟ್ರೋಲ್ ಹಾಕಿ ಸುಟ್ಟುಹಾಕಿದ್ದ. ಕಾಲಿಯಾನನ್ನು ಚಿಕ್ಕಮಗಳೂರು ಜೈಲಿನಿಂದ ವಿಚಾರಣೆಗೆಂದು ಮಂಗಳೂರು ಪೊಲೀಸರು ಕಾಸರಗೋಡಿನ ನ್ಯಾಯಾಲಯಕ್ಕೆ ಕರೆದೊಯ್ಯುವಾಗ ಅಮ್ಮನಿಗೆ ಅಸೌಖ್ಯದ ನೆಪದಲ್ಲಿ ಹೋದ ಕಾಲಿಯಾ ಸೀಯಾಳ ತರುವ ನೆಪದಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ.

ಈ ಪ್ರಕರಣದಲ್ಲಿ ಇಬ್ಬರು ಪೊಲೀಸರನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿತ್ತು. ಕಾಲಿಯಾ ರಫೀಕ್ ಕಾರು ಚಾಲನೆಯಲ್ಲಿ ನಿಸ್ಸೀಮನಾಗಿದ್ದ, ಆತ ಕಾರು ಚಲಾಯಿಸಿದರೆ ಪೊಲೀಸರಿಗೆ ಆತನನ್ನು ಬೆನ್ನಟ್ಟಲು ಸಾಧ್ಯವಿರಲಿಲ್ಲ ಎಂಬ ಮಾತು ಇತ್ತು. ಕಡೆಗೂ ಅಂಕದ ಕೋಳಿ ಅಂಕದಲ್ಲೇ ಹೋಯಿತು ಎಂಬಂತೆ ಕಾಲಿಯಾ ವೈರಿಗಳಿಗೆ ಬಲಿಯಾದ.