ಜಬ್ ಕಾಜೋಲ್ ಮೆಟ್ ಕರಣ್

ಕಾಜೋಲ್ ಹಾಗೂ ಕರಣ್ ಜೋಹರ್ 25 ವರ್ಷಗಳಿಂದ ಸ್ನೇಹಿತರಾಗಿದ್ದರೂ ಒಂದು ಸಣ್ಣ ತಪ್ಪುಗ್ರಹಿಕೆ ಅವರಿಬ್ಬರನ್ನೂ ದೂರಮಾಡಿತ್ತು. ಕಳೆದ ವರ್ಷ ಕರಣ್ ಜೋಹರ್ ಚಿತ್ರ `ಏ ದಿಲ್ ಹೇ ಮುಶ್ಕಿಲ್’ ಹಾಗೂ ಕಾಜೋಲ್ ಪತಿ ಅಜಯ್ ದೇವಗನ್ ಸಿನಿಮಾ `ಶಿವಾಯ್’ ಒಂದೇ ದಿನ ರಿಲೀಸ್ ಆಗಿತ್ತು. ಆ ಸಮಯದಲ್ಲಿ ತನ್ನ ಸಿನಿಮಾಗೆ ಅಡ್ಡಿ ಆಗಬಾರದೆಂದು ಕರಣ್ `ಶಿವಾಯ್’ ಚಿತ್ರದ ಬಗ್ಗೆ ಕೆಟ್ಟ ಪಬ್ಲಿಸಿಟಿ ಹರಡಲು ಕುಮ್ಮಕ್ಕು ನೀಡುತ್ತಿದ್ದಾರೆ ಎನ್ನುವ ಗಾಸಿಪ್ ಹುಟ್ಟಿಕೊಂಡಿತ್ತು. ದೇವಗನ್ ಈ ಬಗ್ಗೆ ಕರಣ್ ಬಗ್ಗೆ ಸಿಕ್ಕಾಪಟ್ಟೆ ಗರಂ ಆಗಿದ್ದರು. ಕಾಜೋಲ್ ಕೂಡಾ ಇದರಿಂದಾಗಿ ಕರಣ್ ಬಗ್ಗೆ ಮುನಿಸಿಕೊಳ್ಳುವಂತಾಗಿತ್ತು. ಅವರಿಬ್ಬರ ಸ್ನೇಹಕ್ಕೇ ಆ ಒಂದು ಘಟನೆ ಮುಳುವಾಗಿತ್ತು. ಆದರೆ ಈಗ ಮತ್ತೆ ಅವರಿಬ್ಬರೂ ಒಟ್ಟಾಗಿದ್ದಾರೆ.

ಮೊನ್ನೆ ಕರಣ್ ತನ್ನ ಸರೋಗೆಸಿಯಿಂದ ಪಡೆದ ಅವಳಿಮಕ್ಕಳ ಫೊಟೋವನ್ನು ಸಾಮಾಜಿಕ ತಾಣದಲ್ಲಿ ಮೊದಲ ಬಾರಿಗೆ ಅಪ್ಲೋಡ್ ಮಾಡಿದ್ದು ಈ ಬಗ್ಗೆ ಕಾಜೋಲ್ ಲೈಕ್ ಹಾಕಿದ್ದಾಳೆ. ಅಷ್ಟೇ ಅಲ್ಲ, ಅಗಸ್ಟ್ 5ರಂದು ಕಾಜೋಲ್ ಬರ್ತಡೇ ಇತ್ತು. ಆ ದಿನ ಕಾಜೋಲ್ ಕರಣ್ ಜೋಹರನನ್ನು ಔತಣಕ್ಕೆ ಆಹ್ವಾನಿಸಿದ್ದಳು. ಕರಣ್ ಕೂಡಾ ಹಿಂದೆಮುಂದೆ ನೋಡದೇ ಕೆಲವೇ ಮಂದಿ ಆಪ್ತರಿರುವ ಆ ಔತಣಕೂಟಕ್ಕೆ ಹೋಗಿದ್ದರು. ಆ ಸಮಯದಲ್ಲಿ ಕರಣ್ ಹಾಗೂ ಕಾಜೋಲ್ ಎಷ್ಟೋ ಸಮಯದಿಂದ ಕಳೆದುಕೊಂಡ ಸ್ನೇಹಿತರ ರೀತಿ ಸಮಯದ ಪರಿವಿಲ್ಲದೇ ಹರಟಿದ್ದೇ ಹರಟಿದ್ದು ಅಂತ ಮೂಲಗಳಿಂದ ತಿಳಿದುಬಂದಿದೆ. ಅಂತೂ ಈ ಹಳೇ ಸ್ನೇಹಿತರು ಮತ್ತೆ ಒಂದಾಗಿದ್ದು ಬಿಟೌನಿಗರಿಗೆ ಖುಶಿ ನೀಡಿದೆ.