ನಿರ್ಮಾಣವಾಗಲಿದೆ ಮೂರಂತಸ್ಥಿನ ಸುಸಜ್ಜಿತ ಕದ್ರಿ ಮಾರುಕಟ್ಟೆ ಸಂಕೀರ್ಣ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಆಗಲೋ ಈಗಲೋ ಬೀಳುವ ಹಂತದಲ್ಲಿದ್ದ ಕದ್ರಿ ಮಾರುಕಟ್ಟೆಗೆ ಕೊನೆಗೂ ಸುಸಜ್ಜಿತ ಮಾರುಕಟ್ಟೆ ಸಂಕೀರ್ಣ ಭಾಗ್ಯ ಸಿಗುತ್ತಿದೆ. 40 ವರ್ಷದ ಹಿಂದಿನ ಶಿಥಿಲ ಮಾರುಕಟ್ಟೆ ಮುಕ್ತಿ ಪಡೆಯಲಿದೆ. ಸದ್ಯ ಇಲ್ಲಿನ ವ್ಯಾಪಾರಿಗಳು ಜೋರಾದ ಗಾಳಿ ಮಳೆ ಬಂದಾಗ ಕಂಗೆಟ್ಟು ಹೋಗುತ್ತಿದ್ದರು. ನಾಲ್ಕೈದು ಕಬ್ಬಿಣದ ಕಂಬದ ಮೇಲೆ, ಶಿಮೆಂಟ್ ಶೀಟ್ ಹಾಸಿದ ಮಾರುಕಟ್ಟೆ ಬೀಳುವ ಸ್ಥಿತಿಯಲ್ಲಿತ್ತು. ಹಿಂದಿನ ಮಾರುಕಟ್ಟೆಯನ್ನು ಕೆಡವಿ ಅದೇ ಜಾಗದಲ್ಲಿ 14.71 ಕೋಟಿ ರೂ ವೆಚ್ಚದಲ್ಲಿ ಮೂರು ಅಂತಸ್ತಿನ ನೂತನ ಮಾರುಕಟ್ಟೆ ಸಂಕೀರ್ಣ ನಿರ್ಮಿಸಲು ನಿರ್ಧರಿಸಲಾಗಿದೆ.

ಪ್ರಸ್ತುತ ಇಲ್ಲಿ ತರಕಾರಿ, ಮಾಂಸದ ಅಂಗಡಿ ಸೇರಿದಂತೆ ಸುಮಾರು 45 ಮಳಿಗೆಗಳು ಕಿರಿದಾದ ಜಾಗದಲ್ಲಿವೆ. ಇಲ್ಲಿ ಮೂಲಭೂತ ಸೌಲಭ್ಯಗಳಿಲ್ಲ. ಮಾರುಕಟ್ಟೆ ನಿರ್ಮಾಣಕ್ಕೆ ಈಗಾಗಲೇ ಶಾಸಕರು ಸಭೆ ನಡೆಸಿದ್ದಾರೆ. ಈಗ ಇರುವ ಮಾರುಕಟ್ಟೆ ಕಟ್ಟಡದ ಭಾಗದಲ್ಲಿ (25 ಸೆಂಟ್ಸ್) ಹಾಗೂ ಪಕ್ಕದಲ್ಲೇ ಲಭ್ಯ ಇರುವ ಪಾಲಿಕೆಯ 45 ಸೆಂಟ್ಸ್ ಜಾಗದಲ್ಲಿ 14.71 ಕೋಟಿ ರೂ ಮೊತ್ತಕ್ಕೆ ಅಂದಾಜು ಪಟ್ಟಿ ತಯಾರಿಸಲಾಗಿದೆ. ಬೆಂಗಳೂರಿನ ಲೋಕೋಪಯೋಗಿ ಇಲಾಖೆಯ ಸಂಪರ್ಕ, ಕಟ್ಟಡಗಳು (ದಕ್ಷಿಣ) ವಿಭಾಗದ ಮುಖ್ಯ ಅಭಿಯಂತರರಿಗೆ ಸಲ್ಲಿಸಿ, ತಾಂತ್ರಿಕ ಪರಿಶೀಲನೆಯನ್ನೂ ನಡೆಸಲಾಗಿದೆ.

6,920 ಚದರ್ ಮೀಟರ್ ವಿಸ್ತೀರ್ಣದಲ್ಲಿ ಮೂರು ಅಂತಸ್ತುಗಳ ಕಟ್ಟಡ ಇದಾಗಿದೆ. ನೂತನ ಮಾರುಕಟ್ಟೆ ಕಾಮಗಾರಿಯನ್ನು ಪಾಲಿಕೆ ವತಿಯಿಂದಲೇ ಆರಂಭಿಸುವಂತೆ ಶಾಸಕ ಲೋಬೊ ಸೂಚಿಸಿದ್ದಾರೆ. “ಇದನ್ನು ಅತ್ಯಂತ ಸುವ್ಯವಸ್ಥಿತವಾಗಿ ನಿರ್ಮಿಸಲಾಗುವುದು. ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದುಕೊಳ್ಳಲಾಗುವುದು. ನೂತನ ಮಾರುಕಟ್ಟೆ ನಿರ್ಮಾಣದ ಸಂದರ್ಭದಲ್ಲಿ ತಾತ್ಕಾಲಿಕ ವ್ಯವಸ್ಥೆಯನ್ನು ವ್ಯಾಪಾರಿಗಳಿಗೆ ಕಲ್ಪಿಸಿಕೊಡಲಾಗುವುದು” ಎಂದು ಶಾಸಕ ಲೋಬೊ ಹೇಳಿದ್ದಾರೆ.