ಕಡಬ ಸಿ ಎ ಬ್ಯಾಂಕ್ ಉಪಾಧ್ಯಕ್ಷಗೆ ತಂಡ ಹಲ್ಲೆ

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಕಡಬ ಸಿ ಎ ಬ್ಯಾಂಕ್ ಉಪಾಧ್ಯಕ್ಷ ರಮೇಶ್ ಭಟ್ ಕಲ್ಪುರೆಗೆ ತಂಡವೊಂದು ಕಬ್ಬಿಣದ ರಾಡಿನಿಂದ ಗಂಭೀರ ಹಲ್ಲೆ ನಡೆಸಿದೆ.

ಕಡಬ ಪೇಟೆಯ ಯಶೋಧ ಜನರಲ್ ಸ್ಟೋರಿನಿಂದ ಸಾಮಾನು ಖರೀದಿಸಿ ರಸ್ತೆ ಬದಿ ನಿಲ್ಲಿಸಲಾಗಿದ್ದ ಜೀಪಿನತ್ತ ಆಗಮಿಸಿದ ಸಂದರ್ಭದಲ್ಲಿ ಏಕಾಏಕಿ ಬಂದ ತಂಡ ಹಲ್ಲೆ ನಡೆಸಿದೆ. ಹಲ್ಲೆಕೋರರು ಸುಮಾರು 55 ಸಾವಿರ ನಗದು, ಚಿನ್ನದ ಸರ, ಮೊಬೈಲ್ ಫೋನ್ ಹಾಗೂ ಬ್ರಾಸ್ಲೆಟ್ ಕಿತ್ತುಕೊಂಡಿದ್ದಾರೆ. ಹಲ್ಲೆ ಬಿಡಿಸಲು ಬಂದ ಸ್ಥಳೀಯರಿಗೂ ಹಲ್ಲೆ  ನಡೆಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟ್ರುಪ್ಪಾಡಿ ಪರಿಸರದ ಪ್ರಕಾಶ್, ಟಿನ್ಸನ್, ಸನೂಷ್, ಲಿಜೋ, ಸಂತೋಷ್ ಎಂಬವರನ್ನು ಸ್ಥಳಿಯರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಹಲ್ಲೆಗೊಳಗಾದ ರಮೇಶ್ ಭಟ್ಟರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಗತಿಪರ ಕೃಷಿಕರಾಗಿರುವ ರಮೇಶ್ ಭಟ್ ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದಾರೆ. ಹಳೆ ದ್ವೇಷ ಹಲ್ಲೆಗೆ ಕಾರಣ ಎಂದು ತಿಳಿದುಬಂದಿದೆ. ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಘಟನೆಯನ್ನು ಖಂಡಿಸಿ ಸೋಮವಾರ ಕಡಬ ಬಂದಿಗೆ ಬಿಜೆಪಿ ಹಾಗೂ ಪರಿವಾರ ಸಂಘಟನೆಗಳು ಕರೆಕೊಟ್ಟಿದೆ.