ಬಂಗೇರ ಮಾಡಿರುವ ಅಭಿವೃದ್ಧಿಯೆಲ್ಲ ಬರೀ ಭಾಷಣದಲ್ಲಿ !

ಶಾಸಕರು ಬೆಳ್ತಂಗಡಿ ಕ್ಷೇತ್ರದ ಅವಶ್ಯಕತೆಗಳನ್ನು ಮುಖ್ಯಮಂತ್ರಿ ಎದುರು ಇಟ್ಟಿದ್ದಾರೆ ಎಂಬ ಬಗ್ಗೆ ಅನುಮಾನವೂ ಇದೆ.

 ವಿಶೇಷ ವರದಿ

ಬೆಳ್ತಂಗಡಿ : ಬೆಳ್ತಂಗಡಿ ವಿಧಾನ ಸಭಾಕ್ಷೇತ್ರದಿಂದ ಐದು ಬಾರಿ ಗೆಲುವು ಸಾಧಿಸಿರುವ, ಭ್ರಷ್ಟಾಚಾರದ ವಿರುದ್ಧ ಭಾರೀ ಭಾಷಣ ಮಾಡುವ, ಬಡವರ ಬಂಧು ಎಂದು ಹೇಳಿಕೊಳ್ಳುವ ಇಲ್ಲಿನ ಶಾಸಕರು ರಾಜ್ಯದ ಬಜೆಟ್ ಮೂಲಕ ತನ್ನ ಕ್ಷೇತ್ರಕ್ಕೆ ತಂದಿದ್ದಾರಾದರೂ ಏನು ಎಂದು ವಿಶ್ಲೇಷಿಸಿದರೆ ಸಿಗುವ ಉತ್ತರ ಶೂನ್ಯವೇ ಆಗಿದೆ.

ಐದನೇ ಬಾರಿಗೆ ಆಯ್ಕೆಯಾಗಿ ಬಂದಾಗ ವಸಂತ ಬಂಗೇರರು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು, “ಹಿಂದೆ ಯಾರೂ ಮಾಡಿರಬಾರದು, ಮುಂದೆ ಯಾರೂ ಮಾಡಬಾರದು, ಅಂತಹ ಅಭಿವೃದ್ಧಿ ಕಾರ್ಯ ಬೆಳ್ತಂಗಡಿಯಲ್ಲಿ ಮಾಡಿ ತೋರಿಸುತ್ತೇನೆ” ಎಂದು. ಆದರೆ ಅಂತಹ ಕಾರ್ಯವೂ ನಡೆದಿಲ್ಲ. ಬರೇ ಭಾಷಣಗಳಲ್ಲಿ ಮಾತ್ರ ಎಂಬುದು ಮುಖ್ಯಮಂತ್ರಿ ಮಂಡಿಸಿದ ಬಜೆಟಿನಲ್ಲಿ ಸಾಬೀತಾಗಿದೆ.

ಎರಡನೆ ಬಾರಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದಾಗ ತಾಲೂಕಿನ ಅನೇಕರಿಗೆ ಒಂದು ಆಶಯ ಇತ್ತು. ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬರುತ್ತದೆ, ಬಂಗೇರರು ಗೆದ್ದರೆ ಸಚಿವರಾಗುತ್ತಾರೆ ಎಂದು. ಬಂಗೇರರೇನೋ ಗೆದ್ದರು, ಸಚಿವರಾಗಲೇ ಇಲ್ಲ. ಈಗ ಕಡೆಗಳಿಗೆಯಲ್ಲಿ ನಿಗಮವೊಂದು ಸಿಕ್ಕಿದೆಯಾದರೂ ಅನುಭವಿಸಲು ಸಮಯ ಸಾಲದು ಎಂದಾಗಿದೆ.

ಮೆಡಿಕಲ್ ಕಾಲೇಜು, ಪಾಲಿಟೆಕ್ನಿಕ್ ಎಂಬ ಬಲೂನು ಟುಸ್ ಆಯಿತು. ರಾಜ್ಯದಲ್ಲಿ ಒಟ್ಟು 45 ಮೆಡಿಕಲ್ ಕಾಲೇಜುಗಳಿವೆ. ಈ ಪೈಕಿ ಜಿಲ್ಲೆಯಲ್ಲಿ 7 ಮೆಡಿಕಲ್ ಕಾಲೇಜುಗಳಿವೆ. ಜತೆಗೆ 2 ದಂತ ವೈದ್ಯಕೀಯ ಕಾಲೇಜುಗಳು, ನರ್ಸಿಂಗ್, ಪಾರಾ ಮೆಡಿಕಲ್ ಕಾಲೇಜುಗಳಿವೆ. ಪ್ರಸ್ತುತ ಕೊಯಿಲದಲ್ಲಿ ಪಶು ವೈದ್ಯಕೀಯ ಕಾಲೇಜು ಆಗುವ ಕಾರಣ ಪುತ್ತೂರು ತಾಲೂಕಿನ ಬೇಡಿಕೆಯೂ ಈಡೇರಿದಂತಾಗಿದ್ದು, ಬೆಳ್ತಂಗಡಿ ತಾಲೂಕು ಮಾತ್ರ ಎಲ್ಲ ರೀತಿಯ ಅಭಿವೃದ್ಧಿಗಳಿಂದಲೂ ವಂಚಿತವಾಗುತ್ತಿದೆ. ಅತ್ತ ಚಿಕ್ಕಮಗಳೂರು ಕಡೆಯಿಂದ ಚಾರ್ಮಾಡಿ ಮುಖಾಂತರ ದಿನವೊಂದಕ್ಕೆ ಹತ್ತಕ್ಕೂ ಅಧಿಕ ಅಂಬುಲೆನ್ಸುಗಳು ಬಡ ರೋಗಿಗಳನ್ನು ಹೊತ್ತುಕೊಂಡು ಮಂಗಳೂರಿನ ವೆನ್ಲಾಕ್ ಹಾಗೂ ಇತರ ಖಾಸಗಿ ಆಸ್ಪತ್ರೆ ಕಡೆಗೆ ದಾಂಗುಡಿಯಿಡುತ್ತವೆ. ಒಂದೊಮ್ಮೆ ಬೆಳ್ತಂಗಡಿ ತಾಲೂಕಿನಲ್ಲ್ಲಿ ಮಂಗಳೂರಿನ ವೆನ್ಲಾಕ್ ಮಾದರಿಯ ಸುಸಜ್ಜಿತ ಸರಕಾರಿ ಆಸ್ಪತ್ರೆ ಇದ್ದರೆ ಮತ್ತೆ ಒಂದೂವರೆ ಗಂಟೆ ಕಾಲ ಮಂಗಳೂರಿಗೆ ಪ್ರಯಾಣಿಸಬೇಕಾದ ಅನಿವಾರ್ಯತೆ ತಪ್ಪುತ್ತದೆ. ತಾಲೂಕಿನಲ್ಲಿ ವಾರ್ಷಿಕ 900ಕ್ಕೂ ಅಧಿಕ ಅಪಘಾತ ಪ್ರಕರಣಗಳು ದಾಖಲಾಗುತ್ತವೆ. ಅಪಘಾತದಲ್ಲಿ ಸಾವನ್ನಪ್ಪುವ ಪ್ರಮಾಣದ ಜತೆಗೆ ದಾರಿ ಮಧ್ಯೆ ಅಸುನೀಗುವ ಪ್ರಕರಣಗಳು ಕೂಡಾ ಸಾಕಷ್ಟಿವೆ. ಇವೆಲ್ಲಕ್ಕೂ ಕಡಿವಾಣ ಹಾಕಲು ಸಾಧ್ಯವಿದೆ. ಶಾಸಕ ಬಂಗೇರರು ಬೆಳ್ತಂಗಡಿಗೆ ಸರಕಾರಿ ಮೆಡಿಕಲ್ ಕಾಲೇಜು ಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಆದರೆ ಅವರ ಬೇಡಿಕೆಗೆ ಸ್ಪಂದನೆ ದಕ್ಕಿಲ್ಲ. ದ ಕ ಜಿಲ್ಲೆಗೇ ಸರಕಾರಿ ಮೆಡಿಕಲ್ ಕಾಲೇಜು ಭಾಗ್ಯ ದೊರೆತಿಲ್ಲ. ಬೆಳ್ತಂಗಡಿಗೆ ಅನಿವಾರ್ಯತೆ ಇದೆ ಎಂದು ಗೊತ್ತಿದ್ದರೂ ಶಾಸಕರಿಂದ ಮಾತ್ರ ಮೆಡಿಕಲ್ ಕಾಲೇಜು ತರಲಾಗಲೇ ಇಲ್ಲ. ಭಾಷಣಗಳಲ್ಲಿ ಮಾತ್ರ ಕಾಲೇಜು ವಿಚಾರ ಕುಟ್ಟಿದರು.

ಬಜೆಟಿನಲ್ಲಿ ದ ಕ ಜಿಲ್ಲೆಗೆ ಸಾಕಷ್ಟು ಕೊಡುಗೆ ಘೋಷಿಸಲಾಗಿದೆ. ಸಮಗ್ರ ಮಂಗಳೂರು ತಾಲೂಕು, ಬಂಟ್ವಾಳಕ್ಕೆ ಆದ್ಯತೆ ನೀಡಲಾಗಿದೆ. ಬಿಟ್ಟರೆ ಇತರ ತಾಲೂಕುಗಳ ಕಡೆಗೆ ತಲೆ ಕೂಡಾ ಹಾಕಲಾಗಿಲ್ಲ. ದ ಕ ಜಿಲ್ಲೆಯಲ್ಲಿ ಎಂಟರ ಪೈಕಿ 7 ಶಾಸಕರು ಕಾಂಗ್ರೆಸ್ಸಿನವರಿದ್ದರೂ ಜಿಲ್ಲೆ ಅನುದಾನ ಪಡೆಯುವಲ್ಲಿ ಹಿಂದೆ ಬಿದ್ದಿದೆ. ಬೆಳ್ತಂಗಡಿಗೆ ಪಾಲಿಟೆಕ್ನಿಕ್ ಕಾಲೇಜು, ಎ ಆರ್ ಟಿ ಒ ಕಚೇರಿ, ಸುಸಜ್ಜಿತ ಬಸ್ ತಂಗುದಾಣ, ಕೆಎಸ್ಸಾರ್ಟಿಸಿ ಡಿಪೋ, ಮಿನಿ ವಿಧಾನಸೌಧಕ್ಕೆ ಹೆಚ್ಚುವರಿ ಅನುದಾನ, ನ್ಯಾಯಾಲಯ ಸಂಕೀರ್ಣಕ್ಕೆ ಹೆಚ್ಚುವರಿ ಅನುದಾನ, ಸರ್ವಋತು ರಸ್ತೆಗಳು, ಸೇತುವೆಗಳು ಹೀಗೆ ಅನೇಕ ಬೇಡಿಕೆ ಇದ್ದರೂ ಯಾವುದಕ್ಕೂ ನಯಾಪೈಸೆ ದಕ್ಕಿಲ್ಲ.

ಪಶ್ಚಿಮ ವಾಹಿನಿಯ ಹೆಸರಿನ 100 ಕೋಟಿ ರೂ ಕೊಡುಗೆ ದೊಡ್ಡದಾಗಿ ಕಾಣುತ್ತದೆಯಾದರೂ ಹರಿವ ನದಿಗೆ ಕಟ್ಟುವ ಕಿಂಡಿ ಅಣೆಕಟ್ಟುಗಳ ಮುಂದೆ ಈ ಮೊತ್ತ ಸಣ್ಣದೇ. ಏಕೆಂದರೆ ನೇತ್ರಾವತಿ ನದಿಗೆ ಹರಿಯುವ ನೀರು ತಡೆದು ಕೋಲಾರ, ಚಿಕ್ಕಬಳ್ಳಾಪುರ ಭಾಗಕ್ಕೆ ರವಾನಿಸಲು 12,900 ಕೋಟಿ ರÀೂ ಎತ್ತಿಡುವ ಸರಕಾರ ಇಲ್ಲಿ  ನೀರಿಂಗಿಸಲು ಕೊಡುವುದು 100 ಕೋಟಿ ರೂ.

ಶಾಸಕರು ಬೆಳ್ತಂಗಡಿ ಕ್ಷೇತ್ರದ ಅವಶ್ಯಕತೆಗಳನ್ನು ಮುಖ್ಯಮಂತ್ರಿ ಎದುರು ಇಟ್ಟಿದ್ದಾರೆ ಎಂಬ ಬಗ್ಗೆ ಅನುಮಾನವೂ ಇದೆ. ಇನ್ನೇನಿದ್ದರೂ ಆರೇಳು ತಿಂಗಳು ಮಾತ್ರ ಸರಕಾರದ ಅವಧಿ. ಬಳಿಕ ನೀತಿ ಸಂಹಿತೆ ಅಡ್ಡಿಯಾಗುತ್ತದೆ. ಹೀಗಾಗಿ ಬೆಳ್ತಂಗಡಿಯಲ್ಲಿ ಯಾರೂ ಮಾಡಿರದ, ಮುಂದೆ ಯಾರೂ ಮಾಡಲಾಗದ ಸಾಧನೆ ಮಾಡಿತೋರಿಸುತ್ತೇನೆ ಎಂಬ ಬಂಗೇರರ ಮಾತು ಮಾತಾಗಿಯೇ ಉಳಿಯಲಿದೆ.