“ನನಗೆ ನ್ಯಾಯ ನಿರಾಕರಿಸಲಾಗಿದೆ”

ಜೀವಾವಧಿ ಶಿಕ್ಷೆಗೊಳಗಾಗಿರುವ ಫಕೀರ್ ಅಹ್ಮದ್

ಮಂಗಳೂರು : ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ 2008ರ ಉಗ್ರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೊಳಗಾದ ಮೂವರಲ್ಲಿ ಒಬ್ಬರಾದ ಫಕೀರ್ ಅಹ್ಮದ್ ತನಗೆ ನ್ಯಾಯ ನಿರಾಕರಿಸಲಾಗಿದೆ ಎಂದು ದೂರಿ ತಾವೇ ಸ್ವತಹ ಬರೆದಿರುವ ಪತ್ರವನ್ನು  ಶಿಕ್ಷೆ ಘೋಷಣೆಯಾಗುವ ಮುನ್ನ ನ್ಯಾಯಾಧೀಶೆ ಎಸ್ ಎಚ್ ಪುಷ್ಪಾಂಜಲಿ ದೇವಿಗೆ  ಸಲ್ಲಿಸಿದರೂ ಅದನ್ನು ಓದಿದ ನ್ಯಾಯಾಧೀಶೆ, ತೀರ್ಪು ಈಗಾಗಲೇ  ಘೋಷಿತವಾಗಿರುವುದರಿಂದ ಈ ಪತ್ರದಿಂದ ಏನೂ ಮಾಡಲು ಸಾಧ್ಯವಿಲ್ಲವೆಂದು ಹೇಳಿದರು.

sÀ“ಕೊಪ್ಪ ತಾಲೂಕಿನ ವಿಠಲಮಕ್ಕಿಯಲ್ಲಿರುವ ತನ್ನ  ಕಟ್ಟಡವೊಂದನ್ನು  ತಾನು  ಬಾಡಿಗೆಗೆ ನೀಡುತ್ತಿರುವ ವ್ಯಕ್ತಿಗಳು ಐಎಂ ಸದಸ್ಯರು ಎಂಬ ಅರಿವಿಲ್ಲದೇ ಅವರೊಂದಿಗೆ ಬಾಡಿಗೆ ಒಪ್ಪಂದಕ್ಕೆ  ಇಂಡೋನೇಷ್ಯದಲ್ಲಿ ಉದ್ಯೋಗದಲ್ಲಿದ್ದ ಅಹ್ಮದ್ ಸಹಿ ಹಾಕಿದ್ದರು. ಮನೆಯಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಬಾರದೆಂದು ಹೇಳುವ ಷರತ್ತಿರುವ ಈ ಬಾಡಿಗೆ ಒಪ್ಪಂದ ಹಾಗೂ  ವಿಶ್ವ ಸಂಸ್ಥೆ ಶಾಂತಿ ಪಡೆಯಲ್ಲಿ ಅವರು ಅಲ್ಪಾವಧಿ ಕೆಲಸ ಮಾಡಿದ ಬಗೆಗಿನ ದಾಖಲೆಗಳನ್ನೂ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು” ಎಂದು ಅಹ್ಮದ್ ಅವರ ವಕೀಲ ಸಮೀರ್ ಕಾಶಿಂಜಿ ಹೇಳುತ್ತಾರೆ.

ತಮ್ಮನ್ನು ಆರೋಪಗಳಿಂದ ಮುಕ್ತಗೊಳಿಸಬೇಕೆಂದು ಕೋರಿ ಅಹ್ಮದ್ ಕೆಲ ತಿಂಗಳ ಹಿಂದೆ ಹೈಕೋರ್ಟಿನಲ್ಲಿ ಅಪೀಲು ಕೂಡ ಸಲ್ಲಿಸಿದ್ದರು. ಈ ಅಪೀಲಿನ ವಿಚಾರಣೆ ನಡೆಸಿದ ಹೈಕೋರ್ಟ್ ಅದನ್ನು ವಿಲೇವಾರಿಗೊಳಿಸುವ ಸಂದರ್ಭದಲ್ಲಿ ಅಹ್ಮದ್ ವಿರುದ್ಧ ಉಗ್ರ ಕೃತ್ಯ ಸಂಬಂಧಿತ ಆರೋಪಗಳನ್ನು ಹಿಂಪಡೆದು  ನಿರ್ದಿಷ್ಟ ಆರೋಪಗಳನ್ನು ಹೊರಿಸಬೇಕೆಂದು  ಆದೇಶಿಸಿತ್ತು.

ಆದರೆ ಹೈಕೋರ್ಟಿನ ಆದೇಶವನ್ನು ಕೆಳಗಿನ ನ್ಯಾಯಾಲಯ ಪಾಲಿಸದೇ ಇದ್ದಾಗ ಅಹ್ಮದ್ ಮತ್ತೆ  ಹೈಕೋರ್ಟಿನ ಗಮನವನ್ನು ಈ ಬಗ್ಗೆ ಸೆಳೆದಿದ್ದರು ಎಂದು ವಕೀಲ ತಿಳಿಸಿದ್ದಾರೆ.

ನ್ಯಾಯಾಧೀಶರಿಗೆ ಪತ್ರ ಬರೆಯುವ ನಿರ್ಧಾರವನ್ನು ಅಹ್ಮದ್ ಅವರೇ ಕೈಗೊಂಡಿದ್ದರು ಎಂದೂ ಅವರು ಹೇಳಿದ್ದಾರೆ.  ಜಿಲ್ಲಾ ನ್ಯಾಯಾಲಯದ ತೀರ್ಪಿನ ವಿರುದ್ಧ ಹೈಕೋರ್ಟಿನಲ್ಲಿ  ದಾವೆ ಹೂಡಲು ಅಹ್ಮದ್ ನಿರ್ಧರಿಸಿದ್ದಾರೆನ್ನಲಾಗಿದೆ.