ಸೂರಿಲ್ಲದವರ ಬಗ್ಗೆ ನ್ಯಾಯ ಮಂಡಲಿಗೆ ಜ್ಞಾನ ಇರಬೇಕು

ವಿಶ್ಲೇಷಣೆ

35 ವರ್ಷದ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಮಲಗಿದ್ದಾಗ ಆತನ ಮೇಲೆ ಟ್ರಕ್ ಒಂದು ಹರಿದು ಮೃತಪಟ್ಟ ಹತ್ತು ವರ್ಷಗಳ ನಂತರ ಮೊಟಾರು ಅಪಘಾತ ನ್ಯಾಯಮಂಡಲಿ ಈ ಪ್ರಕರಣದ ಅಂತಿಮ ತೀರ್ಪು ನೀಡಿದ್ದು, ಅಕಾಲಿಕ ಮೃತ್ಯು ಮತ್ತು ಅಪಘಾತಕ್ಕೆ ಮೃತ ವ್ಯಕ್ತಿಯೂ ಸಮನಾಗಿ ಹೊಣೆಯಾಗುತ್ತಾನೆ ಎಂದು ಹೇಳಿದೆ. ಮೃತ ವ್ಯಕ್ತಿ ತನ್ನ ನಿರ್ಲಕ್ಷ್ಯದಿಂದ ಪ್ರಾಣ ತೆರುವಂತಾಯಿತು ಎಂದು ನ್ಯಾಯಮಂಡಲಿ ಹೇಳಿದೆ. ಸತ್ತ ವ್ಯಕ್ತಿಯ ನಿರ್ಲಕ್ಷ್ಯದ ಕಾರಣ ಆತನಿಗೆ ದೊರೆಯಬೇಕಾದ ಪರಿಹಾರ ಧನವನ್ನು 18 ಲಕ್ಷದಿಂದ 9 ಲಕ್ಷ ರೂಪಾಯಿಗೆ ಇಳಿಸಿದೆ. “ರಸ್ತೆಗಳು ವಾಹನ ಸಂಚಾರಕ್ಕಾಗಿ ಇರುವುದೇ ಹೊರತು ಮಲಗಲು ಅಲ್ಲ” ಎಂದು ನ್ಯಾಯಮಂಡಲಿ ಹೇಳಿದೆ.

ಬಹುಶಃ ನ್ಯಾಯಮಂಡಲಿಯ ನ್ಯಾಯಮೂರ್ತಿಗಳು ಫ್ರಾನ್ಸಿನ ನ್ಯಾಯಶಾಸ್ತ್ರವನ್ನು ಓದಿದ್ದರೆ ಹೀಗೆ ತೀರ್ಪು ನೀಡುತ್ತಿರಲಿಲ್ಲ. ರಸ್ತೆಯಲ್ಲಿ ಮಲಗುವುದು ಬೇಜವಾಬ್ದಾರಿತನ ಎಂದು ನ್ಯಾಯಮಂಡಲಿ ಭಾವಿಸಿದಂತಿದೆ. ಆದರೆ ತಲೆಯ ಮೇಲೆ ಸೂರು ಇರುವವರು ಯಾರೂ ರಸ್ತೆಯಲ್ಲಿ ಮಲಗಲು ಇಚ್ಚಿಸುವುದಿಲ್ಲ ಎಂದು ನ್ಯಾಯಮಂಡಲಿ ಅರಿತಿರಬೇಕು.

ಕೆಲವು ಸಂದರ್ಭಗಳಲ್ಲಿ ಸುಪ್ರೀಂ ಕೋರ್ಟ್ ಈ ರೀತಿ ರಸ್ತೆಯಲ್ಲಿಯೇ ಮಲಗುವ ನಿರಾಶ್ರಿತರಿಗೆ, ಸೂರಿಲ್ಲದವರಿಗೆ ಅನುಕಂಪ ತೋರುವುದೇ ಅಲ್ಲದೆ ಸಂವೇದನೆಯಿಂದ ಸ್ಪಂದಿಸಿದೆ. 2010-11ರಲ್ಲಿ ದೆಹಲಿಯಲ್ಲಿ ಚಳಿಗಾಳದ ಅತಿಯಾದ ಚಳಿಯಲ್ಲೂ ರಸ್ತೆಯಲ್ಲಿ ಮಲಗುತ್ತಿದ್ದ ಬಡ ಜನತೆಯ ಬವಣೆಯನ್ನು ನೋಡಲಾಗದೆ ಸುಪ್ರೀಂ ಕೋರ್ಟ್ ದೆಹಲಿ ನಗರಸಭೆಗೆ ನಿರಾಶ್ರಿತರ ವಸತಿ ಗೃಹಗಳನ್ನು ನಿರ್ಮಿಸಲು ಆದೇಶ ನೀಡಿತ್ತು.

ಆದರೆ ದೇಶದಲ್ಲೇ ಅತ್ಯಂತ ಶ್ರೀಮಂತ ನಗರಾಡಳಿತವನ್ನು ಹೊಂದಿರುವ ಮುಂಬಯಿ ನಗರದಲ್ಲಿ ಸರ್ಕಾರ ಯಾವುದೇ ನಿರಾಶ್ರಿತರ ವಸತಿಗಳನ್ನು ನಿರ್ಮಿಸಿಲ್ಲ ಎನ್ನುವುದನ್ನು ನ್ಯಾಯಮಂಡಲಿ ಪರಿಗಣಿಸಬೇಕಿತ್ತು. ಮನೆ ಇಲ್ಲದವರು ಮತ್ತು ಕಡುಬಡವರು ತಮ್ಮ ಜೀವಕ್ಕೆ ಅಪಾಯ ಇದೆ ಎಂದು ಅರಿತಿದ್ದರೂ ರಸ್ತೆಯಲ್ಲಿ ಏಕೆ ಮಲಗುತ್ತಾರೆ ಎಂಬ ಕಟುಸತ್ಯವನ್ನು ನಾವು ಗ್ರಹಿಸಬೇಕಿದೆ.

ಏಕೆಂದರೆ ಬೇರೆ ಸ್ಥಳಗಳಲ್ಲಿ, ಪಾರ್ಕುಗಳಲ್ಲಿ ಮರಗಳ ಕೆಳಗೆ ಸೊಳ್ಳೆ ಕಾಟ ಹೆಚ್ಚಾಗಿರುತ್ತದೆ. ಹೆದ್ದಾರಿಗಳಲ್ಲಿ ಸೊಂಪಾಗಿ ನಿದ್ರಿಸಬಹುದು ಎಂದೇ ಬಡ ಜನತೆ ಹೀಗೆ ಜೀವಕ್ಕೆ ಸಂಚಕಾರ ಒಡ್ಡಿಕೊಂಡು ರಸ್ತೆಯಲ್ಲಿ ಮಲಗುತ್ತಾರೆ.

ಸೂರಿಲ್ಲದವರಿಗೆ ಸೂರು ಒದಗಿಸುವ ಕನಿಷ್ಠ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳದ ನಮ್ಮ ಸರ್ಕಾರಗಳ ನಿರ್ಲಕ್ಷ್ಯ ನಿಜಕ್ಕೂ ಖಂಡನಾರ್ಹ. ಬಡಜನತೆಯ ಜೀವ ಅಷ್ಟು ಅಗ್ಗ ಅಲ್ಲ ಎಂಬ ಕಟು ವಾಸ್ತವವನ್ನು ಆಳುವ ವರ್ಗಗಳು ಇನ್ನಾದರೂ ಅರಿಯಬೇಕಿದೆ.