ಶೂಟಿಂಗ್ ಸ್ಥಳದಲ್ಲಿ ಜೂನಿಯರ್ ಕಲಾವಿದೆಯ ಶಂಕಾಸ್ಪದ ಸಾವು

ಬೆಂಗಳೂರು : ತಮಿಳು ಸೂಪರ್ ಹಿಟ್ ಚಿತ್ರ `ವಿಐಪಿ’ ಇದರ ಕನ್ನಡ ರಿಮೇಕ್ ಚಿತ್ರದ ಶೂಟಿಂಗ್ ನಡೆಯುತ್ತಿದ್ದ  ಸಿಂಗನಾಯಕನಹಳ್ಳಿ ಸಮೀಪದ ಅವಳಹಳ್ಳಿಯ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಜೂನಿಯರ್ ಕಲಾವಿದೆಯೊಬ್ಬರು ಸೋಮವಾರ ಸಂಜೆ ಶಂಕಾಸ್ಪದವಾಗಿ ಸಾವ್ನಪ್ಪಿದ್ದಾರೆ.

ಪದ್ಮಾವತಿ ಎಂಬ ಹೆಸರಿನ ಸುಮಾರು 40ರ ವಯಸ್ಸಿನ ಈ ಕಲಾವಿದೆ ಕಟ್ಟಡದ 18ನೇ ಮಹಡಿಯಿಂದ ಕೆಳಕ್ಕೆ ಬಿದ್ದು ಸಾವಿಗೀಡಾಗಿದ್ದಾರೆಂದು ಹೇಳಲಾಗಿದೆ. ಆಕೆಯ ದೇಹ ಲಿಫ್ಟ್ ಅಳವಡಿಸಲು ಮೀಸಲಿಟ್ಟ ಜಾಗದಲ್ಲಿ ಆಕೆಯ ಸ್ನೇಹಿತರು ಬಹಳಷ್ಟು ಹುಡುಕಾಡಿದ ಬಳಿಕ ಪತ್ತೆಯಾಗಿದೆ.

ಚಿತ್ರದ ನಾಯಕ ನಟ ರವಿಚಂದ್ರನ್ ಪುತ್ರ ಮನೋರಂಜನ್ ಎಂಟ್ರಿ ದೃಶ್ಯದ ಶೂಟಿಂಗ್ ನಡೆಸುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆಯೆಂದು ಶಂಕಿಸಲಾಗಿದೆ.

ಈ ನಿರ್ಮಾಣ ಹಂತದ ಕಟ್ಟಡದಲ್ಲಿ 100ಕ್ಕೂ ಹೆಚ್ಚು ಮಂದಿ ಜೂನಿಯರ್ ಕಲಾವಿದರು ಆ ಸಂದರ್ಭ ಹಾಜರಿದ್ದರು. ಚಿತ್ರ ತಂಡ ಇಲ್ಲಿ ಶೂಟಿಂಗ್ ನಡೆಸಲು ಕೇವಲ ಮೌಖಿಕ ಅನುಮತಿ ಪಡೆದಿತ್ತೆನ್ನಲಾಗಿದೆ.

ಚಿತ್ರೀಕರಣ ಮುಗಿದ ನಂತರ ಮುಖ್ಯ ಕಲಾವಿದರು ಹಿಂದಿರುಗಿದ್ದರೆ ಜೂನಿಯರ್ ಕಲಾವಿದರು ತಮ್ಮ ಸಂಭಾವನೆಗಾಗಿ ಕಾದು ಕುಳಿತಿದ್ದಾಗ ಪದ್ಮಾವತಿ ನಾಪತ್ತೆಯಾಗಿರುವುದು  ತಿಳಿದುಬಂದಿತ್ತು. ಘಟನೆಯನ್ನು ಎಲ್ಲಾ ಕೋನಗಳಿಂದಲೂ ತನಿಖೆ ನಡೆಸಲಾಗುವುದು ಎಂದು ರಜನಕುಂಟೆ ಪೊಲೀಸರು ತಿಳಿಸಿದ್ದಾರೆ.

ದುನಿಯಾ ವಿಜಯ್ ಅಭಿನಯದ `ಮಾಸ್ತಿಗುಡಿ’ ಸಿನಿಮಾ ಶೂಟಿಂಗ್ ವೇಳೆ ಕಳೆದ ನವೆಂಬರ್ ತಿಂಗಳಲ್ಲಿ ನಡೆದ ಅವಘಡದಲ್ಲಿ ಇಬ್ಬರು ಕಲಾವಿದರು ಮುಳುಗಿ ಸಾವನ್ನಪ್ಪಿದ ನಂತರ ನಡೆದ ಎರಡನೇ ದುರಂತ ಇದಾಗಿದೆ.