ಜೆ ಪಿ ಹೆಗ್ಡೆಯ ನೂರಾರು ಬೆಂಬಲಿಗರು ದೇವೇಗೌಡ ಸಮಕ್ಷಮ ಜೆಡಿಎಸ್ಸಿಗೆ

ಉಡುಪಿ : ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಬಿಜೆಪಿ ಸೇರಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಹರಡಿರುವಾಗಲೇ, ಅವರ ನೂರಾರು ಬೆಂಬಲಿಗರು ನಿನ್ನೆ ಇಲ್ಲಿನ ಮೂಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವರಿಷ್ಠ ನಾಯಕ ದೇವೇಗೌಡರ ಉಪಸ್ಥಿತಿಯಲ್ಲಿ ಜೆಡಿಎಸ್ ಸೇರಿಕೊಂಡರು.

ಹೆಗ್ಡೆಯವರು ಈ ಹಿಂದೆ ಕಾಂಗ್ರೆಸ್ಸಿನಲ್ಲಿದ್ದು, ಇವರಿಗೆ ಯುವ ಕಾಂಗ್ರೆಸ್ ಸದಸ್ಯರು ಬೆಂಬಲ ನೀಡಿದ್ದರು. ಆದರೆ ಹೆಗ್ಡೆ ಕಾಂಗ್ರೆಸ್ಸಿನಿಂದ ಉಚ್ಚಾಟನೆಗೊಂಡ ಬಳಿಕ ಇವರೆಲ್ಲ ಕಾಂಗ್ರೆಸ್ಸಿನಿಂದ ಬೇರ್ಪಡೆಗೊಂಡು, ಹೆಗ್ಡೆಗೆ ಬೆಂಬಲ ವಿಸ್ತರಿಸಿದ್ದರು.

ಹೆಗ್ಡೆ ತಾನು ಬಿಜೆಪಿ ಸೇರುತ್ತೇನೆ ಎಂದು ಹೇಳಿದ್ದು ಇದೀಗ ಅವರ ಬೆಂಬಲಿಗರು ಜೆಡಿಎಸ್ ಸೇರಿಕೊಂಡಿದ್ದಾರೆ.

ಬಿಜೆಪಿ ಸೇರಲು ಇಚ್ಚಿಸದ ಇವರು ಕಾಂಗ್ರೆಸ್ಸಿನಲ್ಲಿ ಮುಂದುವರಿಯಲು ಇಷ್ಟಪಟ್ಟಿಲ್ಲ. ಕಾರಣ, ಇವರೆಲ್ಲ ಜಾತ್ಯತೀತ ಜೆಡಿಎಸ್ ಆಯ್ಕೆ ಮಾಡಿಕೊಂಡಿ ದ್ದಾರೆಂದು ತಿಳಿದು ಬಂದಿದೆ.

ಜೆಡಿಎಸ್ ಸೇರಿಕೊಂಡವರಲ್ಲಿ ಮಾಜಿ ಯುವ ಕಾಂಗೆಸ್ ಮುಖಂಡ ರೋಹಿತ್ ಕರಂಬಳ್ಳಿ ಒಳಗೊಂಡಿದ್ದಾರೆ. “ಹೆಗ್ಡೆ ಬಿಜೆಪಿ ಸೇರಿಕೊಳ್ಳಲಿದ್ದಾರೆಂದು ನಾವು ಜೆಡಿಎಸ್ ಸೇರಿಕೊಂಡಿಲ್ಲ. ಅವರು ಯಾವುದೇ ಪಕ್ಷ ಸೇರಿಕೊಳ್ಳಲು ಸ್ವತಂತ್ರರಾಗಿದ್ದಾರೆ. ನಮಗೆ ಕಾಂಗ್ರೆಸ್ ಮತ್ತು ಬಿಜೆಪಿ ಬೇಡವಾಗಿದೆ. ಹಾಗಾಗಿ ಜೆಡಿಎಸ್ ಆಯ್ಕೆ ಮಾಡಿಕೊಂಡಿದ್ದೇವೆ. ಮುಂದಿನ ತಿಂಗಳು ಇನ್ನಷ್ಟು ಮಂದಿ ಜೆಡಿಎಸ್ ಸೇರಿಕೊಳ್ಳಲಿದ್ದಾರೆ” ಎಂದು ಕರಂಬಳ್ಳಿ ಹೇಳಿದರು.