ಜೋಯಿಡಾ : ಪರಿಸರ ಸೂಕ್ಮ ವಲಯ ಘೋಷಣೆ ವಿರುದ್ಧ ಬೃಹತ್ ಪ್ರತಿಭಟನೆ

ಜೋಯಿಡಾ ಮುಖ್ಯ ರಸ್ತೆಯಲ್ಲಿ ಬೆಂಕಿ ಹಚ್ಚಿ ಪ್ರತಿಭಟಿಸಿದ ಪ್ರತಿಭಟನಾಕಾರರು

ನಮ್ಮ ಪ್ರತಿನಿಧಿ ವರದಿ

ಜೋಯಿಡಾ (ಉ ಕ ಜಿಲ್ಲೆ) : “ತಾಲೂಕಿನ ಒಂದಿಂಚು ಭೂಮಿಯನ್ನೂ ಬಿಡುವ ಪ್ರಶ್ನೆಯೇ ಇಲ್ಲ, ಹಿಂದೆ ಸರ್ಕಾರಕ್ಕೆ ವಿವಿಧ ಯೋಜನೆಗಳಿಗೆ ನಮ್ಮ ತಾಲೂಕಿನ ಭೂಮಿಯನ್ನು ಬಳಸಿದ್ದು, ಈಗ ನಮ್ಮ ಬದುಕುವ ನೆಲೆಯನ್ನೂ ಕಸಿಯಲು ನಿಂತಿದೆ. ಇದಕ್ಕಾಗಿ ನಾವು ಯಾವ ತ್ಯಾಗಕ್ಕೂ ಸಿದ್ಧ” ಎಂದು ಜೋಯಿಡಾ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ರಫೀಕ್ ಖಾಜಿ ಹೇಳಿದರು.

ಅವರು ಮಂಗಳವಾರ ಸರ್ಕಾರದ ಪರಿಸರ ಸೂಕ್ಮ ವಲಯ ಘೋಷಣೆಯನ್ನು ವಿರೋಧಿಸಿ ಆಯೋಜಿಸಿದ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತಿದ್ದರು. “ತಾಲೂಕಿನಲ್ಲಿ ಕಳೆದ 35 ವರ್ಷಗಳಿಂದ ಹಲವಾರು ಯೋಜನೆಗಳನ್ನು ತರುವ ಮೂಲಕ ಜನರನ್ನು ಅತಂತ್ರರನ್ನಾಗಿ ಮಾಡಿದ್ದು, ಈಗ ಪರಿಸರ ಸೂಕ್ಷ್ಮ ವಲಯ ಎನ್ನುವ ಮೂಲಕ ಜನಜೀವನವನ್ನೇ ಹಾಳು ಮಾಡಿದ್ದಾರೆ. ಇದಕ್ಕಾಗಿ ನಾವು ದೇಶದ ರಾಜಧಾನಿ ದಿಲ್ಲಿಯವರೆಗೆ ಹೋಗಿ ನ್ಯಾಯ ಕೇಳುತ್ತೇವೆ” ಎಂದರು.

ಸಂಜೀವಿನಿ ಸೇವಾ ಸಂಸ್ಥೆಯ ಅಧ್ಯಕ್ಷ ರವಿ ರೇಡ್ಕರ ಮಾತನಾಡಿ, “ನಾವೆಲ್ಲಾ ಒಂದಾಗಿರದ ಕಾರಣ ತಾಲೂಕಿನಲ್ಲಿ ಇಂಥ ಯೋಜನೆಗಳು ಜಾರಿಯಾಗುತ್ತಿವೆ. ಈಗಾಗಲೇ 10,000 ಕುಟುಂಬಗಳು ಬೀದಿಪಾಲಾಗಿವೆ. ಇನ್ನೂ 600 ಕುಟುಂಬಗಳಿಗೆ ಕಾಳಿ ನದಿ ಯೋಜನೆಯ ಪರಿಹಾರವನ್ನು ಕರ್ನಾಟಕ ವಿದ್ಯುತ್ ನಿಗಮ ನೀಡಿಲ್ಲ. ವಿವಿಧ ಯೊಜನೆಗಳಿಂದ ಅತಂತ್ರರಾದ 8,000 ಜನರು ಗೋವಾದಲ್ಲಿ ಕೂಲಿ ಮಾಡುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೆಳಿಗ್ಗೆ 9 ಗಂಟೆಯಿಂದಲೇ ಪರಿಸರ ಸೂಕ್ಷ್ಮ ವಲಯ ಘೋಷಣೆ ವಿರೋಧಿಸಿ ಜನ ಸ್ವಯಂಪ್ರೇರಿತರಾಗಿ ಜೋಯಿಡಾದ ಮುಖ್ಯ ವೃತ್ತಕ್ಕೆ ಬಂದು ಪ್ರತಿಭಟನೆಯಲ್ಲಿ ಭಾಗವಹಿಸಿದರು. ಇದೇ ಮೊದಲ ಬಾರಿಗೆ ಜೋಯಿಡಾ, ಕುಂಬಾರವಾಡ, ರಾಮನಗರ, ಅಣಶಿ ಮುಂತಾದ ಕಡೆಗಳಲ್ಲಿ ರಸ್ತೆ ತಡೆ ನಡೆಸಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಪರಿಸರ ಸೂಕ್ಷ್ಮ ವಲಯ ಘೋಷಣೆ ಜಾರಿ ಮಾಡುವುದನ್ನು ವಿರೋಧಿಸಿದರು,

ಪ್ರತಿಭಟನೆಯ ನಂತರ ತಹಶೀಲ್ದಾರ ಮೂಲಕ ಕೇಂದ್ರ ಸರ್ಕಾರದ ಪರಿಸರ ಮಂತ್ರಾಯಲಕ್ಕೆ ಮನವಿ ಸಲ್ಲಿಸಲಾಯಿತು.