ಯುವಕನ ಮನೆ ಮುಂದೆ ಯುವತಿ ಧರಣಿ

ಕೈಕೊಟ್ಟ ಪ್ರಿಯತಮ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಪ್ರೀತಿಸುವ ನಾಟಕವಾಡಿ, ಮದುವೆಯಾಗುವ ಭರವಸೆ ನೀಡಿದ್ದ ಪ್ರೇಮಿ, ತನ್ನಿಂದ ಸುಖ ಪಡೆದುಕೊಂಡ ಬಳಿಕ ಇದೀಗ ಮದುವೆಯಾಗಲು ನಿರಾಕರಿಸುತ್ತಿದ್ದಾನೆ, ಮನೆ ಮಂದಿ ಆತನನ್ನು ಬಚ್ಚಿಟ್ಟುಕೊಂಡಿದ್ದಾರೆ ಎಂದು ಆರೋಪಿಸಿರುವ ಯುವತಿ, ಇದೀಗ ಪ್ರಿಯಕರ ಮನೆ ಮುಂಭಾಗ ಠಿಕಾಣಿ ಹೂಡಿ ನ್ಯಾಯ ಕೊಡಿಸಿ ಎಂದು ಅಂಗಾಲಾಚುತ್ತಿದ್ದಾಳೆ.

ಈ ಘಟನೆ ನಡೆದಿರುವುದು ಉಡುಪಿ ತಾಲೂಕು ಪಾಂಡೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ. ಅಕ್ಕಪಕ್ಕದ ಮನೆಯಲ್ಲಿರುವ ಈ ಪ್ರೇಮಿಗಳಿಬ್ಬರು ಸುಮಾರು 3 ವರ್ಷಗಳಿಂದ ಪ್ರೀತಿಸುತ್ತಿದ್ದರು. ಆ 4ರಂದು ಮಣಿಪಾಲದ ಹೊಟೇಲ್ ಒಂದರಲ್ಲಿ ಯುವಕ ದೈಹಿಕ ಸಂಪರ್ಕ ಬೆಳೆಸಿದ್ದ ಎಂದು ಹೇಳುವ ಯುವತಿ, ಇದಾದ ಬಳಿಕ ಆತ ಸರಿಯಾಗಿ ಮಾತಿಗೆ ಸಿಗದೇ ತಪ್ಪಿಸಿಕೊಳ್ಳುತ್ತಿದ್ದಾನೆ ಎಂದು ದೂರಿದ್ದಾಳೆ.

ಕಂಗಾಲಾಗಿರುವ ಆಕೆ ನವೆಂಬರ್ ತಿಂಗಳಿನಲ್ಲಿ ಉಡುಪಿ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಳು. ದೂರನ್ನು ಆಧರಿಸಿ ಇಬ್ಬರ ಪೋಷಕರ ಸಮ್ಮುಖದಲ್ಲಿ ವಿಚಾರಣೆ ನಡೆದಿದ್ದು, ರಿಜಿಸ್ಟರ್ ಮದುವೆಯಾಗುವ ಕುರಿತು ಪ್ರಸ್ತಾಪವಾಗಿತ್ತು.

ಇದೀಗ ಯುವಕನ ಪೋಷಕರು ಆತನನ್ನು ತಲೆಮರೆಸಿ ಇಟ್ಟಿದ್ದಾರೆ ಎಂದು ಆರೋಪಿಸಿ ಅವರ ಮನೆಯ ಮುಂದೆ ಯುವತಿ ಧರಣಿ ಕುಳಿತಿದ್ದಾಳೆ. “ಆತನ ಜೊತೆ ನನಗೆ ಮಾತನಾಡಲು ಬಿಡಿ, ಅವನನ್ನು ಕರೆ ತಂದು ನನ್ನ ಮುಂದೆ ನಿಲ್ಲಿಸಿ ನನಗೆ ಅನ್ಯಾಯವಾಗಿದೆ, ನನ್ನ ಜೊತೆ ಮದುವೆ ಮಾಡಿಸಿ” ಎನ್ನುವ ಬೇಡಿಕೆ ಇಟ್ಟು ಧರಣಿ ನಡೆಸುತ್ತಿದ್ದಾಳೆ.