ಮಾಲಿ ಗ್ರಾಮಸ್ಥರ ಮೇಲೆ ಶರೀಯ ಹೇರುತ್ತಿರುವ ಜಿಹಾದಿಗಳಿಂದ ಹತ್ಯೆ

ಮಾಲಿ :  ಇಸ್ಲಾಮಿಕ್ ತೀವ್ರಗಾಮಿಗಳು ಮಾಲಿಯ ಹಲವಾರು ಗ್ರಾಮಗಳಲ್ಲಿ ಜನರ ಮೇಲೆ ಶರೀಯ ಕಾನೂನು ಹೇರಿದ್ದಾರಲ್ಲದೆ, ಸರಕಾರಿ ಅಧಿಕಾರಿಗಳನ್ನು  ಹತ್ಯೆಗೈದಿದ್ದಾರೆಂದು ಮಾನವ ಹಕ್ಕುಗಳ ಸಂಘಟನೆ `ಹ್ಯೂಮನ್ ರೈಟ್ಸ್ ವಾಚ್’ ತಿಳಿಸಿದೆ. ಬ್ಯಾಪ್ಟಿಸಂ ಹಾಗೂ ಮುಸ್ಲಿಮೇತರ ವಿವಾಹ ಸಮಾರಂಭಗಳಲ್ಲಿ ಭಾಗವಹಿಸುವವರನ್ನೂ ಈ ಉಗ್ರರು ಬೆದರಿಸುತ್ತಿದ್ದಾರೆಂದು ಸಂಘಟನೆ ದೂರಿದೆ.

ಇಸ್ಲಾಮಿಕ್ ಉಗ್ರವಾದಿ ಸಂಘಟನೆಗಳಾದ ಅಲ್-ಕೈದಾ, ಅನ್ಸಾರ್ ದಿನೆ, ದಿ ಮಸೀನಾ ಲಿಬರೇಶನ್ ಫ್ರಂಟ್  ಹಾಗೂ ದಿ ಮೂವ್ಮಂಟ್ ಫಾರ್  ಯುನಿಟಿ ಎಂಡ್ ಜಿಹಾದ್ ಇನ್ ವೆಸ್ಟ್ ಆಫ್ರಿಕಾ ಇವುಗಳು  ಮಧ್ಯ ಹಾಗೂ ಉತ್ತರ ಮಾಲಿಯ ಪ್ರದೇಶಗಳಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿವೆ ಎಂದು ಹ್ಯೂಮನ್ ರೈಟ್ಸ್ ವಾಚ್ ವರದಿ ಉಲ್ಲೇಖಿಸಿದೆ.

ಈ ಉಗ್ರ ಸಂಘಟನೆಗಳು ಗ್ರಾಮಸ್ಥರ ಮೇಲೆ ಹೇರುತ್ತಿರುವ ನಿರ್ಬಂಧಗಳನ್ನು ಹಾಗೂ ದೊಡ್ಡ ಸಂಖ್ಯೆಯ ಜನರನ್ನು ಹತ್ಯೆಗೈಯ್ಯುವುದನ್ನು ತಡೆಯಲು ಮಾಲಿ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದೂ ವರದಿ ತಿಳಿಸಿದೆ.