ನಗರದಲ್ಲಿ ತಯಾರಿಸಲ್ಪಡುವ ಮೀನು ಮಾರಾಟದ ಬಾಕ್ಸ್ ಖರೀದಿಸಲು ಜಾರ್ಖಂಡ್, ತಮಿಳುನಾಡು ಸರಕಾರ ಆಸಕ್ತಿ

ನಗರದಲ್ಲಿ ತಯಾರಾಗುವ ಫಿಶ್ ವೆಂಡಿಂಗ್ ಮೆಷಿನ್

ರಾಜ್ಯ ಸರಕಾರ ನಿರಾಸಕ್ತಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಬಹಳಷ್ಟು ಕಾಲದವರೆಗೆ ಮೀನು ಕೆಡದಂತೆ ಇರಿಸಿಕೊಳ್ಳುವುದು ಮೀನು ಮಾರಾಟಗಾರರಿಗೆ ಸವಾಲಿನ ಕೆಲಸ. ಈ ಹಿನ್ನೆಲೆಯಲ್ಲಿ ಮಂಗಳೂರು ಮೂಲದ ಫಿಶರೀಶ್ ಕಾಲೇಜು ಕೆಲವು ವರ್ಷಗಳ ಹಿಂದೆ ಮೀನು ಕೆಡದಂತೆ ಇಡುವ ಅತ್ಯಾಧುನಿಕ ಮಾದರಿಯ ಮೀನು ಸಂಸ್ಕರಣಾ ಬಾಕ್ಸ್ ತಯಾರಿಸಿತ್ತು. ಈ ಬಾಕ್ಸುಗಳಿಗೆ ಇದೀಗ ಬೇಡಿಕೆ ಬಂದಿದೆ. ಜಾರ್ಖಂಡ್ ಮತ್ತು ತಮಿಳುನಾಡು ರಾಜ್ಯ ಸರಕಾರ ಈ ಬಾಕ್ಸ್ ಖರೀದಿಸಿ ತನ್ನ ರಾಜ್ಯದ ಮೀನು ಮಾರಾಟಗಾರರಿಗೆ ವಿತರಿಸಲು ಆಸಕ್ತಿ ತೋರಿಸಿದೆ. ಆದರೆ ರಾಜ್ಯ ಸರಕಾರ ಮಾತ್ರ ಇನ್ನೂ ಮನಸ್ಸು ಮಾಡಿಲ್ಲ.

3 ಅಡಿ ಅಗಲವಿರುವ ಈ ಮೀನು ಮಾರಾಟದ ಬಾಕ್ಸ್ (ವೆಂಡಿಂಗ್ ಮೆಷಿನ್) ವೆಚ್ಚ ಸರಿಸುಮಾರು 25,000 ರೂ. ಇದರಲ್ಲಿ ಮೀನುಗಳನ್ನು ಚೆನ್ನಾಗಿ ಪ್ರದರ್ಶಿಸಬಹುದಲ್ಲದೇ, ಬಹಳ ದಿನಗಳ ಕಾಲ ಕೆಡದಂತೆ ಹಾಗೂ ಆರೋಗ್ಯಕರವಾಗಿ ಸಂಸ್ಕರಿಸಬಹುದಾಗಿದೆ.

ಈ ಮೆಷಿನನ್ನು ಫಿಶರೀಸ್ ಕಾಲೇಜಿನ ಫಿಶ್ ಪ್ರೊಸೆಸಿಂಗ್ ಟೆಕ್ನಾಲಜಿ 2012ರಲ್ಲಿ ಅಭಿವೃದ್ಧಿ ಪಡಿಸಿತ್ತು. ಅದೇ ವರ್ಷ ರಾಂಚಿಯಲ್ಲಿ ನಡೆದ ಪ್ರದರ್ಶನ ಮೇಳದಲ್ಲಿ ಜಾರ್ಖಂಡ್ ಅಧಿಕಾರಿಗಳು ಇವುಗಳನ್ನು ವೀಕ್ಷಣೆ ಮಾಡಿದ್ದರು.

ಬಳಿಕ ಕಳೆದ ವರ್ಷ ಜಾರ್ಖಂಡ್ ಮೀನುಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಂಗಳೂರಿನ ಫಿಶರೀಶ್ ಕಾಲೇಜಿಗೆ ಆಗಮಿಸಿ, ಈ ಮೆಷಿನ್ ಕುರಿತ ಹೆಚ್ಚಿನ ಮಾಹಿತಿ ಪಡೆದುಕೊಂಡರು.

ಇದೀಗ ಜಾರ್ಖಂಡ್ ಸರಕಾರಿ ಅಧಿಕಾರಿಗಳು ಇವುಗಳನ್ನು ಇನ್ನಷ್ಟು ಆಧುನೀಕರಣಗೊಳಿಸಿ ಖರೀದಿ ಮಾಡಿ ತಮ್ಮ ರಾಜ್ಯದ ಮೀನು ಮಾರಾಟಗಾರರಿಗೆ ವಿತರಿಸಲು ನಿರ್ಧರಿಸಿದ್ದಾರೆ ಎನ್ನುತ್ತಾರೆ ಫಿಶ್ ಪ್ರೊಸೆಸಿಂಗ್ ಟೆಕ್ನಾಲಜಿಯ ವಿಭಾಗದ ಮುಖ್ಯಸ್ಥ ಸಿ ವಿ ರಾಜು.

ಅಲ್ಲದೆ ತಮಿಳುನಾಡು ಸರಕಾರವು ಕೂಡಾ ಈ ಮೆಷಿನುಗಳನ್ನು ಖರೀದಿಸಲು ಆಸಕ್ತಿ ತೋರಿಸಿದೆ. ಈ ಹಿಂದೆ ಮೀನುಗಾರಿಕಾ ಸಚಿವರಾಗಿದ್ದ ಅಭಯಚಂದ್ರ ಜೈನ್ ಅವರು 5000 ರೂ ಸಬ್ಸಿಡಿ ದರದಲ್ಲಿ ಇವುಗಳನ್ನು ಮೀನುಗಾರರಿಗೆ ವಿತರಣೆ ಮಾಡಲು ಆಸಕ್ತಿ ತೋರಿಸಿದ್ದರು.