ಜ್ಯುವೆಲ್ಲರಿ ಸಿಬ್ಬಂದಿ ಶವ ಪತ್ತೆ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಉಪ್ಪಿನಂಗಡಿಯ ಜ್ಯುವೆಲ್ಲರಿ ಅಂಗಡಿ ಕೆಲಸ ಮಾಡುತ್ತಿದ್ದ ಕೇಶವ ಆಚಾರ್ಯ (45) ಎಂಬವರ ಶವ ಬಂಟ್ವಾಳ ತಾಲೂಕಿನ ಅಜಿಲಮೊಗರು ನೇತ್ರಾವತಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೂಲತಃ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ನಿವಾಸಿಯಾಗಿದ್ದ ಇವರು ಉಪ್ಪಿನಂಗಡಿಯ ಜ್ಯುವೆಲ್ಲರಿ ಮಳಿಗೆಯೊಂದರಲ್ಲಿ ಚಿನ್ನದ ಕುಸುರಿ ಕೆಲಸ

ಮಾಡಿಕೊಂಡು ಉಪ್ಪಿನಂಗಡಿಯಲ್ಲೇ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇವರ ಪತ್ನಿ ಹಾಗೂ ಪುತ್ರಿ ಮಂಗಳೂರಿನಲ್ಲಿ ವಾಸವಾಗಿದ್ದಾರೆ ಎನ್ನಲಾಗಿದೆ. ನಿತ್ಯ ಅಂಗಡಿಗೆ ಕೆಲಸಕ್ಕೆ ಹೋಗುತ್ತಿದ್ದ ಕೇಶವ ಆಚಾರ್ಯ ಕಳೆದ ಶನಿವಾರದಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಶನಿವಾರ ಬಂಟ್ವಾಳ ತಾಲೂಕಿನ ಅಜಿಲಮೊಗರು ನೇತ್ರಾವತಿ ನದಿ ತೀರದಲ್ಲಿ ಇವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಯಾವುದೋ ಕಾರಣಕ್ಕೆ ನದಿಗೆ ಹಾರಿ ಇವರು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಿರುವ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.