ಚಿನ್ನಾಭರಣ ಕಳವು : ಆರೋಪಿ ಬಂಧನ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾರವಾರ : ಮಲ್ಲಾಪುರದ ಮನೆಯೊಂದರ ಕಪಾಟಿನಲ್ಲಿಟ್ಟಿದ್ದ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಯನ್ನು ಸಮಗ್ರ ವಿಚಾರಣೆಗೆ ಒಳಪಡಿಸಿದ್ದು, ಇತ್ತೀಚೆಗೆ ದಾಂಡಿಯಾ ನೃತ್ಯ ನಡೆಯುತ್ತಿರುವಾಗ ಕೆಲವು ಮನೆಗಳ ಹೆಂಚು ತೆಗೆದು ಕಳ್ಳತನ ಮಾಡಿರುವುದಲ್ಲದೇ, ಈ ಭಾಗದಲ್ಲಿ ಸಣ್ಣಪುಟ್ಟ ಕಳ್ಳತನವನ್ನು ತಾನೇ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆಂದು ಸೋಮವಾರ ಮಲ್ಲಾಪುರ ಪೊಲೀಸರು ತಿಳಿಸಿದ್ದಾರೆ.
ಮಲ್ಲಾಪುರದ ಇರ್ಪಾಂಗಿ ನಿವಾಸಿ ಸಂಜಯ ಪಾಟೀಲ್ (33) ಬಂಧಿತ ಆರೋಪಿ. ಈತನು ಪಕ್ಕದ ಮನೆಯ ದತ್ತಾತ್ರಯ ನಾಯ್ಕ ಮಾಲಿಕತ್ವದ ಮನೆಯಲ್ಲಿ ಕಳವು ಮಾಡಿದ್ದನು. ಮನೆ ಮಾಲಿಕ ಸೆಪ್ಟೆಂಬರ್ 20ರಂದು ಬ್ಯಾಂಕ್ ಲಾಕರಿನಲ್ಲಿದ್ದ 3.47 ಲಕ್ಷ ರೂ ಮೌಲ್ಯದ 17 ತೊಲೆ ಚಿನ್ನಾಭರಣಗಳನ್ನು ಮನೆಗೆ ತಂದು ಕಪಾಟಿನ ಲಾಕರಿನಲ್ಲಿ ಇಟ್ಟಿದ್ದರು. ಈ ಮಾಹಿತಿ ಪಡೆದ ಆರೋಪಿತನು ಪಕ್ಕದ ಮನೆಯಲ್ಲಿ ಪೆಂಟಿಂಗ್ ಕೆಲಸದ ನೆಪದಲ್ಲಿ ಸಮಯ ನೋಡಿ ಕಳ್ಳತನ ಮಾಡಿ ಪರಾರಿಯಾಗಿ ತಲೆಮರೆಸಿಕೊಂಡಿದ್ದನು. ಕಳವಾದ ಬಗ್ಗೆ ಮಾಹಿತಿ ಪಡೆದ ಪೊಲೀಸರು ತನಿಖೆ ಕೈಗೊಂಡು, ಶ್ವಾನದಳದ ಮೂಲಕ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದರು.