ಚಿನ್ನದ ವ್ಯಾಪಾರಿ ದರೋಡೆ ಪ್ರಕರಣ : ಇಬ್ಬರು ಬಿಡುಗಡೆ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಮಣಿಪಾಲದಲ್ಲಿ ಕೇರಳ ಮೂಲದ ಚಿನ್ನದ ವ್ಯಾಪಾರಿಯನ್ನು ದರೋಡೆ ನಡೆಸಿ ಕಳೆದ ಒಂದೂವರೆ ತಿಂಗಳ ಹಿಂದೆ ಉಡುಪಿ ಡಿಸಿಐಬಿ ಪೊಲೀಸರ ಬಲೆಗೆ ಬಿದ್ದ 9 ಮಂದಿ ಆರೋಪಿಗಳ ಪೈಕಿ ಇಬ್ಬರು ಆರೋಪಿಗಳು ಜಾಮೀನಿನ ಮೇಲೆ ಹೊರಬಂದಿದ್ದಾರೆ

ಅಪರಾಧ ನಡೆಸಿ ನಾಲ್ಕೀ ದಿನದಲ್ಲಿ ಪೊಲೀಸರ ಬಲೆಗೆ ಬಿದ್ದಆರೋಪಿಗಳ ಪೈಕಿ ಕುಂದಾಪುರದ ಹೆಮ್ಮಾಡಿ ಸಂತೋಷನಗರ ನಿವಾಸಿಗಳಾದ ಮಂಜೂರ್ ಇಲಾಯಿದ್ ಹಾಗೂ ಇರ್ಫಾನ್ ಇದೀಗ ಜಾಮೀನು ಪಡೆದು ಹೊರಬಂದಿದ್ದಾರೆ. ಇಲಾಯಿದ್ ಎರ್ಮಾಳಿನ ಯುವತಿಯೊಬ್ಬಳನ್ನು ಮದುವೆಯಾಗಿ ಎರ್ಮಾಳು-ಉಚ್ಚಿಲ-ಮೂಳೂರು ಪ್ರದೇಶದಲ್ಲಿ ಸುತ್ತಾಡಿಕೊಂಡಿದ್ದು ಮೂಳೂರಿನಲ್ಲಿ ವಾಸವಾಗಿದ್ದ. ಇಲ್ಲಿಂದಲೇ ಪೊಲೀಸರು ಈತನನ್ನು ವಶಕ್ಕೆ ಪಡೆದುಕೊಂಡಿದ್ದರು.

ಕೇರಳ ತ್ರಿಶೂರಿನ ತನಿಕನ್ ನಿವಾಸಿ ದಿಲೀಪ್ ಎಂಬವರೇ ದರೋಡೆಗೊಳಗಾದವರು. ಇವರು ರಾತ್ರಿ ಹೊತ್ತು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಬಸ್ಸೇರಿದ ಆರೋಪಿಗಳು ಚಿನ್ನದ ಆಭರಣ ನೀಡುವಂತೆ ಬೆದರಿಸಿದ್ದಾರೆ. ಸಹಾಯಕ್ಕಾಗಿ ಬೊಬ್ಬೆ ಹಾಕಿದಾಗ ಅವರನ್ನು ಮಣಿಪಾಲದ ಈಶ್ವರ ನಗರದಲ್ಲಿ ಅವರನ್ನು ಬಲವಂತವಾಗಿ ಕೆಳಗಿಳಿಸಿ, ಕಾರಿನಲ್ಲಿ ಅಪಹರಿಸಿದ ದುಷ್ಕರ್ಮಿಗಳು ಅವರಲ್ಲಿದ್ದ ರೂ 42 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ರೂ 2,57,200 ನಗದನ್ನು ದೋಚಿ ಪಡುಬಿದ್ರಿ ಬಳಿ ಬಿಟ್ಟು ಹೋಗಿದ್ದರು. ಈ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.