ಕಾರ್ಕಳದಲ್ಲಿ ಚಿನ್ನ ಕದ್ದ ಮುಂಬೈ ಮೂಲದ ಟಿಪ್-ಟಾಪ್ ದರೋಡೆಕೋರರ ಬಂಧನ

ನಮ್ಮ ಪ್ರತಿನಿಧಿ ವರದಿ      

ಕಾರ್ಕಳ : ಕಳೆದ ಜೂನ್ 12ರಂದು ಕಾರ್ಕಳ ರಥಬೀದಿಯಲ್ಲಿನ ಆಭರಣ ಜ್ಯುವೆಲ್ಲರ್ಸ್ ಚಿನ್ನಾಭರಣ ಮಳಿಗೆಗೆ ಟಿಪ್-ಟಾಪ್ ಗ್ರಾಹಕರ ಸೋಗಿನಲ್ಲಿ ಬಂದ 6 ಜನರ ತಂಡವೊಂದು ಸುಮಾರು 2.35 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಪ್ರಕರಣದ ಕುರಿತಂತೆ ಕಾರ್ಕಳ ಪೊಲೀಸರು ಮಹಾರಾಷ್ಟ್ರ ಮೂಲದ 6 ಜನ ಕುಖ್ಯಾತ ದರೋಡೆಕೋರರನ್ನು ಬಂಧಿಸಿ, ಬಂಧಿತರಿಂದ ಕಳವಿಗೆ ಬಳಸಲಾದ ಸ್ಕಾರ್ಪಿಯೋ ವಾಹನ, 73,000 ಮೌಲ್ಯದ ಚಿನ್ನಾಭರಣಗಳು ಮೊಬೈಲ್ ಸೇರಿದಂತೆ 27,000 ನಗದು ವಶಪಡಿಸಿಕೊಂಡಿದ್ದಾರೆ.

ಮಹಾರಾಷ್ಟ್ರ ರಾಜ್ಯದ ಪೂನಾ ಜಿಲ್ಲೆಯ ಸುಖಸಾಗರ್ ನಗರದ ನಿವಾಸಿ ಮಂಜರಿ ಪ್ರಶಾಂತ್ ನಾಗ್ಫುರೆ (37), ಇಂದಿರಾನಗರ್ ವಿಐಟಿ ಕಾಲೇಜ್ ನಿವಾಸಿ ಕೋಮಲ್ ರಾಥೋಡ್ (35), ಪೂನಾದ ಸತಾರ್ ರೋಡ್ ನಿವಾಸಿ ಸಂದೀಪ್ ಜಾದವ್ (27), ಪೂನಾದ ದಾಹಿರಿಗಾಂವ್ ಸಿಯಾಘಡ್ ರೋಡಿನ ನಿವಾಸಿಗಳಾದ ಪ್ರಕಾಶ್ ಲಾಲಸಿಂಗ್ ಸಾಳುಂಕಿ (60), ಆತನ ಪತ್ನಿ ವಿದ್ಯಾ ಸಾಳುಂಕಿ (50), ಕಲ್ಪನಾ ರಾಥೋಡ್ (27) ಎಂಬವರು ಬಂಧಿತ ಆರೋಪಿಗಳು.

ಈ ಕಳವು ಪ್ರಕರಣ ನಡೆದು 5 ತಿಂಗಳ ಬಳಿಕ ಮತ್ತೊಮ್ಮೆ ಕಳ್ಳತನಕ್ಕೆ ಹೊಂಚು ಹಾಕಲು ತಮ್ಮ ಸ್ಕಾರ್ಪಿಯೋ ವಾಹನದಲ್ಲಿ ಕಾರ್ಕಳದಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದಾಗ ಅನುಮಾನಗೊಂಡ ಪೊಲೀಸರು ಶುಕ್ರವಾರ ಸಂಜೆ ಕಾರನ್ನು ಪರಿಶೀಲಿಸಿ ಇವರನ್ನು ಠಾಣೆಗೆ ಕರೆಸಿ ತೀವ್ರ ವಿಚಾರಣೆ ನಡೆಸಿಗಾದ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ. ಇದೇ ತಂಡ ಮೂಡಬಿದ್ರೆಯಲ್ಲೂ ಚಿನ್ನದಂಗಡಿಯೊಂದಕ್ಕೆ ನುಗ್ಗಿ ಸುಮಾರು 80,000 ಮೌಲ್ಯದ ಚಿನ್ನಾಭರಣವನ್ನು ಕದ್ದು ಪರಾರಿಯಾಗಿತ್ತು.

ಈ ದರೋಡೆಕೋರರು ಶ್ರೀಮಂತರ ಧಿರಿಸಿನಲ್ಲಿ ಟಿಪ್-ಟಾಪ್ ಆಗಿರುತ್ತಿದ್ದು, ಇವರ ಹಾವಭಾವದಿಂದ ಯಾರಿಗೂ ಇವರು ದರೋಡೆಕೋರರು ಎಂಬ ಅನುಮಾನ ಬರುತ್ತಿರಲಿಲ್ಲ. ಈ ಪ್ರಕರಣ ನಡೆದು 6 ತಿಂಗಳ ಬಳಿಕ ಕಾರ್ಕಳ ಪೊಲೀಸರು ದರೋಡೆ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದು, ಮತ್ತೊಂದು ದರೋಡೆಗೆ ಸಂಚು ರೂಪಿಸಿದ್ದ ಷಡ್ಯಂತ್ರವನ್ನು ವಿಫಲಗೊಳಿಸಿದ್ದಾರೆ.