ಪ್ರತಿಭಟನೆಗೆ ಮಣಿದು ರೂ 15 ಲಕ್ಷ ಪರಿಹಾರ

ಜಲ್ಲಿ  ಕ್ರಷರಿನಲ್ಲಿ ಲಾರಿ ಚಾಲಕ ಮೃತ್ಯು

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ಬೋರುಗುಡ್ಡೆಯ ರೋಬೋ ಸಿಲಿಕಾನ್ ಜಲ್ಲಿ ಕ್ರಷರ್‍ನಲ್ಲಿ ಡೋಜರ್ ವಾಹನ ಡಿಕ್ಕಿ ಹೊಡೆದು ಸಾವನಪ್ಪಿದ್ದ ಬೆಳ್ತಂಗಡಿ ಉರುವಾಲುಪದವು ನಿವಾಸಿ ಸುಜಿತ್ ಕುಮಾರ್(26)ಗೆ ಪರಿಹಾರ ನೀಡಲು ನಿರಾಕರಿಸಿದ ಕಂಪೆನಿ ವಿರುದ್ಧ ಮೃತರ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿ ಪರಿಹಾರ ಮೊತ್ತವನ್ನು ಪಡಕೊಂಡ ಪ್ರಸಂಗ ಗುರುವಾರ ನಡೆಯಿತು.

ರೋಬೊ ಸಿಲಿಕಾನ್ ಜಲ್ಲಿಕ್ರಷರಿನಲ್ಲಿ ಬುಧವಾರ ದೋಜರ್ ಚಾಲಕನ ನಿರ್ಲಕ್ಷ್ಯದಿಂದ ಹಿಂಬದಿಯಲ್ಲಿದ್ದ ಸುಜಿತಕುಮಾರಗೆ ಡಿಕ್ಕಿ ಹೊಡೆದು ಆತ ಸಾವನಪ್ಪಿದ್ದ.  ಈ ವಾಹನಕ್ಕೆ ಸೂಕ್ತ ದಾಖಲೆಗಳು ಕೂಡ ಇರಲಿಲ್ಲ ಎನ್ನಲಾಗಿದೆ. ಘಟನೆ ದಿನ ಕಂಪೆನಿ ಪ್ರಮುಖರೊಂದಿಗೆ ನಡೆಸಿದ ಮಾತುಕತೆಯಲ್ಲಿ ಮೃತನ ಕುಟುಂಬಕ್ಕೆ ರೂ 15 ಲಕ್ಷ ಪರಿಹಾರ ನೀಡಲು ಕಂಪೆನಿ ಒಪ್ಪಿತ್ತು. ಆದರೆ ಮರುದಿನ ಅಂದರೆ ಗುರುವಾರ ಕಂಪೆನಿ ಪ್ಲೇಟ್ ಬದಲಾಯಿಸಿ ಕೇವಲ ರೂ 5 ಲಕ್ಷ ಮಾತ್ರ ಪರಿಹಾರ ನೀಡುವುದಾಗಿ ತಿಳಿಸಿತ್ತು  ಮತ್ತು ಅದರ ಬಗ್ಗೆ ಗ್ಯಾರಂಟಿ ನೀಡದೆ ಉದ್ಧಟತನ ತೋರಿತು. ಇದು ಮೃತರ ಕುಟುಂಬಕ್ಕೆ ಗಾಯದ ಮೇಲೆ ಬರೆ ಎಳೆದಂತಾಯಿತು. ಕಂಪೆನಿಯ ವಿಶ್ವಾಸಘಾತಕ ನಿಲುವಿನಿಂದ ಸಿಟ್ಟಿಗೆದ್ದ ಮೃತ ಸುಜಿತನ ಊರಿನವರು, ಬೋರುಗುಡ್ಡೆ ಆಸು ಪಾಸಿನವರು ಮತ್ತು ಜನಪ್ರತಿನಿಧಿಗಳು ಗುರುವಾರ ಕ್ರಷರಿಗೆ ಧಾವಿಸಿ ಪ್ರತಿಭಟನೆಗೆ ಮುಂದಾದರು. ಕಂಪೆನಿಯ ಸಂಬಂಧಪಟ್ಟವರು ಬೆಳಿಗ್ಗೆ ಬರುವುದಾಗಿ ತಿಳಿಸಿದ್ದರೂ ಬಾರದಿದದ್ದರಿಂದ ಆಕ್ರೋಶಿತ ಪ್ರತಿಭಟನಾಕಾರರು, ಕುಟುಂಬಕ್ಕೆ ಆಧಾರಸ್ತಂಭವಾಗಿರುವ ಮೃತ ಸುಜಿತ್ ಕುಟುಂಬಕ್ಕೆ ರೂ 15 ಲಕ್ಷ ಪರಿಹಾರ ಕೊಡದಿದ್ದಲ್ಲಿ ಇಲ್ಲಿಗೆ ಶವ ತಂದು ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದರು.

ಕೊನೆಗೆ ಪ್ರತಿಭಟನೆಯ ಗಂಭೀರತೆಯನ್ನು ಅರಿತ ಕಂಪೆನಿಯ ಪ್ರಮುಖರಲ್ಲೊಬ್ಬರಾದ ಗಣೇಶ್ ಪ್ರಭು ಮಧ್ಯಾಹ್ನ ಸ್ಥಳಕ್ಕೆ ಬಂದು ಮಾತುಕತೆ ನಡೆಸಿದರು. ಪ್ರಾರಂಭದಲ್ಲಿ ನಡೆದ ಮಾತುಕತೆಯಂತೆ ರೂ 15 ಲಕ್ಷ ಪರಿಹಾರ ನೀಡಬೇಕೆಂದು ಮೃತರ ಕುಟುಂಬದವರು ಪಟ್ಟು ಹಿಡಿದುದರಿಂದ ಅನ್ಯದಾರಿಯಿಲ್ಲದೆ ಕಂಪೆನಿ ಕೊನೆಗೆ ಆ ಮೊತ್ತವನ್ನು ಕೊಡಲು ಒಪ್ಪಿಕೊಂಡಿದ್ದರಿಂದ ಪ್ರತಿಭಟನೆಯನ್ನು ಕೈಬಿಡಲಾಯಿತು.

ಹಣದ ವ್ಯವಸ್ಥೆ ಮಾಡದೆ ಬರಿಗೈಯಲ್ಲಿ ಬಂದಿದ್ದ ಕಂಪೆನಿ ಪ್ರಮುಖರು ಕೊನೆಗೆ ಸಾರ್ವಜನಿಕರ ಒತ್ತಡಕ್ಕೆ ಮಣಿದು ಕರಾರು ಪತ್ರ ನೀಡಿ ಚೆಕ್ ನೀಡಲು ಒಪ್ಪಿಕೊಂಡಿದ್ದು ಅದನ್ನು ಗುರುವಾರವೇ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆನ್ನಲಾಗಿದೆ.