ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ `ಜೀವರಕ್ಷಕ ಪ್ರಶಸ್ತಿ’

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಸರಕಾರವು ನೂತನವಾಗಿ ಜಾರಿಗೊಳಿಸಿರುವ ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆಯು ರಾಜ್ಯದ ವ್ಯಾಪ್ತಿಯಲ್ಲಿ ಘಟಿಸಿದ ರಸ್ತೆ ಅಪಘಾತದ ಯಾವುದೇ ಗಾಯಾಳುಗಳಿಗೆ 48 ಗಂಟೆಗಳವರೆಗೆ ಗರಿಷ್ಠ ರೂ 25000ಗಳವರೆಗೆ ಉಚಿತ ತುರ್ತು ಚಿಕಿತ್ಸೆಯನ್ನು ಒದಗಿಸಲಾಗುತ್ತದೆ. ಈ ಯೋಜನೆಯನ್ವಯ ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ ನೀಡಲಾಗುತ್ತಿದ್ದು, ಅಪಘಾತದ ಸಂದರ್ಭದಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಮಾನವೀಯ ನೆಲೆಯಲ್ಲಿ ಸ್ಪಂದಿಸಿದ ವ್ಯಕ್ತಿಗಳು ಸಂಬಂಧಿತ ಇಲಾಖೆಗಳಿಂದ ಅರ್ಜಿ ಪಡೆದುಕೊಂಡು ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

2016ರ ಮಾರ್ಚ್ 8ರಿಂದ ಇದು ರಾಜ್ಯದಾದ್ಯಂತ ಜಾರಿಗೆ ಬಂದಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಗ ಸಂಸ್ಥೆಯಾದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ನ ಮೂಲಕ ಅನುಷ್ಠಾನಗೊಳ್ಳುತ್ತಿದೆ. 2015ರ ರಸ್ತೆ ಅಪಘಾತದ ಸಮೀಕ್ಷೆಯು ತಿಳಿಸುವಂತೆ ಅಪಘಾತ ಹಾಗೂ ಸಾವುಗಳ ಸಂಖ್ಯೆಯಲ್ಲಿ ಕರ್ನಾಟಕ ರಾಜ್ಯವು ದೇಶದ 3ನೇ ರಾಜ್ಯವಾಗಿರುತ್ತದೆ.

ಅಪಘಾತದ ಸಂದರ್ಭದಲ್ಲಿ ಚಿಕಿತ್ಸೆ ಒದಗಿಸಲು ನೆರವಾಗುವವರಿಗೆ ಇದೀಗ `ಜೀವ ರಕ್ಷಕ ಪ್ರಶಸ್ತಿ’ ನೀಡುವ ಮೂಲಕ ಅಂತಹ ವ್ಯಕ್ತಿಗಳನ್ನು ಗೌರವಿಸಲು ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಪ್ರಶಸ್ತಿಯನ್ನು ಸ್ಥಾಪಿಸುವ ಬಹುಮುಖ್ಯ ಉದ್ದೇಶವೆಂದರೆ ಅಪಘಾತದ ಸಂದರ್ಭದಲ್ಲಿ ಸ್ಥಳದಲ್ಲಿ ಲಭ್ಯವಿರುವ ವ್ಯಕ್ತಿಗಳು ಯಾವುದೇ ವಿಳಂಬವಿಲ್ಲದೆ ಗಾಯಾಳುಗಳನ್ನು ರಕ್ಷಿಸಲು ತಕ್ಷಣವೇ ಆಸ್ಪತ್ರೆಗಳಿಗೆ ಸಾಗಿಸುವುದು ಹಾಗೂ ಚಿಕಿತ್ಸೆ ಕೊಡಿಸಲು ನೆರವಾಗುವುದು ಮುಂತಾದ ಕಾರ್ಯಗಳನ್ನು ನಿರ್ವಹಿಸುವಂತೆ ಪೆÇ್ರೀತ್ಸಾಹಿಸುವುದಾಗಿದೆ.

ಅರ್ಹತಾ ಮಾನದಂಡಗಳು

ಕರ್ನಾಟಕ ವ್ಯಾಪ್ತಿಯೊಳಗಿನ ರಸ್ತೆ ಅಪಘಾತದ ಗಾಯಾಳುಗಳಿಗೆ ಸಹಾಯ ಮಾಡಲು ಶ್ರಮಿಸುವ ಯಾವುದೇ ವಯಸ್ಸಿನ ವ್ಯಕ್ತಿ/ಯಾವುದೇ ರಾಷ್ಟ್ರೀಯತೆಯ ವ್ಯಕ್ತಿ. ರಸ್ತೆ ಅಪಘಾತ ಗಾಯಾಳುಗಳಿಗೆ ನೆರವಾದ ಅಥವಾ ಜೀವ ಉಳಿಸಲು ಶ್ರಮಿಸಿದ ವ್ಯಕ್ತಿ ಪ್ರಶಸ್ತಿಗಾಗಿ ಸ್ವಯಂ ರೂಪದಲ್ಲಿ ಅಥವಾ ಸಾಕ್ಷಿಯಾದ ವ್ಯಕ್ತಿಯಿಂದ ನಾಮಕರಣಗೊಳ್ಳಬಹುದು.

ಜೀವರಕ್ಷಕ ಪ್ರಶಸ್ತಿಯ ಆಯ್ಕೆ ವಿಧಾನ

ಎಲ್ಲ ನಾಮಕರಣ/ಅರ್ಜಿಗಳನ್ನು ಜಿಲ್ಲಾ ಜೀವರಕ್ಷಕ ಪ್ರಶಸ್ತಿ ಸಮಿತಿಯು ಪರಿಶೀಲಿಸಿ ಮಾರ್ಗಸೂಚಿಗಳ ಅನ್ವಯ ಮೌಲ್ಯಮಾಪನ ನಡೆಸಿ ವ್ಯಕ್ತಿಗಳು ನೀಡಿದ ಸಹಾಯ ಹಾಗೂ ಸದರಿ ಸಹಾಯದಿಂದ ಉಂಟಾದ ಉತ್ತಮ ಪರಿಣಾಮ ಮುಂತಾದವುಗಳನ್ನು ಆಧರಿಸಿ, ಪ್ರಶಸ್ತಿಗಳನ್ನು ಪ್ರಥಮ, ದ್ವಿತೀಯ ಹಾಗೂ ತೃತೀಯ ಎಂದು ವಿಭಾಗಿಸಿ ಘೋಷಿಸಲಾಗುತ್ತದೆ. ಒಂದು ವರ್ಷದಲ್ಲಿ 2 ಬಾರಿ ಈ ಪ್ರಶಸ್ತಿ ನೀಡಲಾಗುವುದು. ಅರ್ಜಿಗಳನ್ನು ಜನವರಿಯಿಂದ ಜುಲೈವರೆಗೆ ಹಾಗೂ ಆಗಸ್ಟ್‍ನಿಂದ ಡಿಸೆಂಬರ್‍ವರೆಗೆ ಸ್ವೀಕರಿಸಲಾಗುವುದು. ಪ್ರಶಸ್ತಿಗಳನ್ನು ಪ್ರತೀ ವರ್ಷ ಆ 15 ಮತ್ತು ಜ 26ರಂದು ನೀಡಲಾಗುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಈ ಪ್ರಶಸ್ತಿಗಳನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆ ದಿನಾಂಕ. ಹೆಚ್ಚಿನ ಮಾಹಿತಿ ಮತ್ತು ಅರ್ಜಿ ಫಾರಂನ್ನು ಜಿಲ್ಲಾ ಸಂಯೋಜಕರು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಂಗಳೂರು ದೂರವಾಣಿ ಸಂಖ್ಯೆ 7259003406 ಇವರಿಂದ ಪಡೆಯಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ತಿಳಿಸಿದ್ದಾರೆ.