ಕಮರಿಗೆ ಉರುಳಿದ ವಾಹನ

ಕಾರ್ಕಳ : ಚಾಲಕ ನಿಯಂತ್ರಣ ತಪ್ಪಿದ ಮಹೀಂದ್ರ ತೂಫಾನ್ ವಾಹನ ಕಮರಿಗೆ ಉರುಳಿ ವಾಹನದಲ್ಲಿದ್ದ 12 ಮಂದಿಗೆ ಗಾಯಗೊಂಡ ಘಟನೆ ತಾಲೂಕಿನ ಮಾಳ ಎಸ್ ಕೆ ಬಾರ್ಡರಿನಲ್ಲಿ ಶುಕ್ರವಾರ ನಡೆದಿದೆ.

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ 16 ಮಂದಿ ತೂಫಾನ್ ವಾಹನದಲ್ಲಿ ಧಾರ್ಮಿಕ ಕ್ಷೇತ್ರಗಳ ದರ್ಶನಕ್ಕಾಗಿ ತೆರಳುತ್ತಿದ್ದರು. ಒಂದೇ ಕುಟುಂಬದ ಸದಸ್ಯರಾಗಿರುವ ಶಾರದ (25) ಗಂಭೀರ ಗಾಯಗೊಂಡಿದ್ದಾರೆ. ಜತೆಗಿದ್ದ ಮಹಂತೇಶ (26), ಸಿದ್ದಲಿಂಗಯ್ಯ (60), ಉಮಾ (45), ವಿಜಯ್ (24), ಕಸ್ತೂರಿ (38), ಲಲಿತಾ (45), ಸಾಧು (53), ರಾಜನ್ (50), ನಾಗೇಂದ್ರ(16), ರಮೇಶ್ (41) ಮತ್ತು ಮಂಜುಳ (23) ಎಂಬವರುಗಳಿಗೆ ಸಾಮಾನ್ಯ ಸ್ವರೂಪದ ಗಾಯಗಳಾಗಿದ್ದು, ಅವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗದಗದಿಂದ ಹೊರಟ ಈ ಕುಟುಂಬಿಕರು ಶೃಂಗೇರಿ ದೇವಳಕ್ಕೆ ತೆರಳಿ, ಬಳಿಕ ಕಾರ್ಕಳ ಮಾರ್ಗವಾಗಿ ಧರ್ಮಸ್ಥಳಕ್ಕೆ ಹೊರಟಿದ್ದು ಇದೇ ವೇಳೆ ಈ ದುರ್ಘಟನೆ ನಡೆದಿದೆ.