ಪುತ್ತೂರು ಜೆಡಿಎಸ್ ಕಚೇರಿ ಉದ್ಘಾಟಿಸದಂತೆ ಸೂಚನೆ

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ಪುತ್ತೂರು ಜೆಡಿಎಸ್ಸಿನಲ್ಲಿ ಮತ್ತೆ ತಳಮಳ ಶುರುವಾಗಿದೆ. ಕೆಲವು ದಿನಗಳ ಹಿಂದೆ ಮಂಗಳೂರಿಗೆ ಬಂದಿದ್ದ ಜೆಡಿಎಸ್ ವರಿಷ್ಟ ಎಚ್ ಡಿ ದೇವೇಗೌಡರು ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದು, ಆ ಬಳಿಕ ನೂತನ ಅಧ್ಯಕ್ಷರು ಪಕ್ಷವನ್ನು ಕಟ್ಟುವ ಕೆಲಸದಲ್ಲಿ ಕಳೆದ ಒಂದು ತಿಂಗಳಿನಿಂದ ಕಾರ್ಯಪವೃತ್ತರಾಗಿದ್ದಾರೆ. ನ 30ರಂದು ಪುತ್ತೂರಿನಲ್ಲಿ ಪಕ್ಷದ ಕಚೇರಿಯ ಉದ್ಘಾಟನೆಯೂ ನೆರವೇರಲಿದೆ. ಈ ನಡುವೆ ರಾಜ್ಯ ಜೆಡಿಎಸ್ ಕಾರ್ಯಾಧ್ಯಕ್ಷ ನಾರಾಯಣ ರಾವ್ ಜಿಲ್ಲಾಧ್ಯಕ್ಷಗೆ ಪತ್ರ ಬರೆದು “ವಿಧಾನಸಭಾ ಅಧ್ಯಕ್ಷರ ಆಯ್ಕೆ ಸಮರ್ಪಕವಾಗಿಲ್ಲ” ಎಂದು ನೂತನ ಕಚೇರಿ ಉದ್ಘಾಟನೆ ಕಾರ್ಯವನ್ನು ಮುಂದೂಡುವಂತೆ ಪತ್ರದಲ್ಲಿ ತಿಳಿಸಲಾಗಿದೆ.

ಪುತ್ತೂರಿನ ಜೆಡಿಎಸ್ ಅಧ್ಯಕ್ಷರಾಗಿ ಈ ಹಿಂದೆ ಕಾರ್ಯನಿರ್ವಹಿಸಿದ್ದ ಗೋಳಕಟ್ಟೆ ಇಬ್ರಾಹಿಂರನ್ನು ಬದಲಾಯಿಸಿದ ದೇವೇಗೌಡರು ಪಕ್ಷದ ಯುವ ನಾಯಕರಾದ ಐ ಸಿ ಕೈಲಾಸರನ್ನು ನೇಮಿಸಿದ್ದರು. ಈ ಕುರಿತು ಅಧಿಕೃತ ಆದೇಶವನ್ನೂ ನೀಡಿದ್ದರು. ಪಕ್ಷದ ಅಭಿವೃದ್ಧಿಗೆ ಕೆಲಸ ಮಾಡುವಂತೆ ಕೈಲಾಸರಲ್ಲಿ ತಿಳಿಸಿದ್ದರು. ಈ ಕಾರಣದಿಂದ ಕಳೆದ ಒಂದು ತಿಂಗಳಿನಿಂದ ನೂತನ ಅಧ್ಯಕ್ಷರು ಪಕ್ಷಕ್ಕೆ ಸದಸ್ಯರನ್ನು ನೇಮಕ ಮಾಡುವ ಕಾರ್ಯವನ್ನು ಮಾಡುತ್ತಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಿಂದ ಹಲವಾರು ಮಂದಿ ಕಾರ್ಯಕರ್ತರು ಈಗಾಗಲೇ ಜೆಡಿಎಸ್ ಸೇರಿದ್ದಾರೆ. ನ 30ರಂದು ಪುತ್ತೂರಿನ ದರ್ಬೆಯಲ್ಲಿ ಪಕ್ಷದ ಕಚೇರಿಯ ಉದ್ಘಾಟನೆಯನ್ನೂ ಇಟ್ಟುಕೊಂಡಿದ್ದಾರೆ. ಈ ನಡುವೆ ಕಾರ್ಯಾಧ್ಯಕ್ಷರ ಪತ್ರ ಬಂದಿದ್ದು, ಪಕ್ಷದ ಕಾರ್ಯಕರ್ತರಲ್ಲಿ ತಳಮಳ ಉಂಟುಮಾಡಿದೆ. ಈ ಕುರಿತು ಜಿಲ್ಲಾಧ್ಯಕ್ಷರ ಕಚೇರಿಯಲ್ಲಿ ಕೇಳಿದರೆ “ಪುತ್ತೂರಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿದ್ದು ನಮ್ಮ ದಾಖಲೆಯಲ್ಲಿ ಇಲ್ಲ. ದೇವೆಗೌಡರು ನೇಮಕ ಮಾಡಿದ್ದು ಎಂದು ಹೇಳುತ್ತಿದ್ದರೂ ನಮ್ಮ ಕಚೇರಿಯಲ್ಲಿ ಕೈಲಾಸ್ ಅಧ್ಯಕ್ಷರು ಎಂದು ಯಾವುದೇ ದಾಖಲೆ ಇಲ್ಲ. ನೂತನ ಅಧ್ಯಕ್ಷರು ಯಾವುದೇ ರೀತಿಯ ಸಮಿತಿಯನ್ನು ರಚನೆ ಮಾಡುವಂತಿಲ್ಲ” ಎಂದು ತಿಳಿಸಿದ್ದಾರೆ.

ಈ ಕುರಿತು ಪುತ್ತೂರು ಜೆಡಿಎಸ್ ಅಧ್ಯಕ್ಷ ಕೈಲಾಸರಲ್ಲಿ ಕೇಳಿದರೆ, “ನನ್ನನ್ನು ಪಕ್ಷದ ವರಿಷ್ಟ ದೇವೇಗೌಡರು ನೇಮಕ ಮಾಡಿದ್ದಾರೆ. ಅದರಂತೆ ಪಕ್ಷವನ್ನು ಕಟ್ಟುವ ಕೆಲಸದಲ್ಲಿ ನಿರತನಾಗಿದ್ದೇನೆ. ಪಕ್ಷದ ಕಚೇರಿ ನ 30ಕ್ಕೆ ಉದ್ಘಾಟನೆಯಾಗಲಿದೆ, ಯಾವುದೇ ಸೂಚನೆ ಬಂದರೂ ನಿಗದಿಯಂತೆ ಉದ್ಘಾಟನೆ ನಡೆಯಲಿದೆ. ಪತ್ರವನ್ನು ಕಳುಹಿಸಿರುವ ಹಿಂದೆ ಕೆಲವರ ಪಿತೂರಿ ಇದೆ, ಪಿತೂರಿ ನಡೆಸಿದವರು ಮತ್ತು ಈ ಹಿಂದೆ ಪಕ್ಷದಲ್ಲಿ ಪಿತೂರಿ ನಡೆಸಿ ಕಾರ್ಯಕರ್ತರನ್ನು ಕಡೆಗಣಿಸಿದ್ದು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ದೇವೇಗೌಡರು ವಹಿಸಿರುವ ಕಾರ್ಯವನ್ನು ಚಾಚೂ ತಪ್ಪದೆ ಮಾಡುತ್ತೇನೆ” ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ಕಾರ್ಯಕರ್ತರೇ ಇಲ್ಲದ ಪುತ್ತೂರು ಜೆಡಿಎಸ್ಸಿನಲ್ಲಿ ಇರುವ ಕೆಲವು ನಾಯಕರೊಳಗಿನ ಭಿನ್ನಮತದಿಂದಾಗಿ ಪಕ್ಷದಲ್ಲಿ ತಳಮಳ ಜೋರಾಗುತ್ತಲೇ ಇದೆ.