ಆಸ್ನೋಟಿಕರ್ ಆದಷ್ಟು ಬೇಗ ತಮ್ಮ ಪಕ್ಷ ಸೇರಲಿ ಎಂದು ತವಕಿಸುತ್ತಿರುವ ಜೆಡಿಎಸ್ ನಾಯಕರು

ಬಿಜೆಪಿಗೆ ಮರು ಪ್ರವೇಶವಿಲ್ಲ ಎಂದ ಟಿಕೆಟ್ ಆಕಾಂಕ್ಷಿಗಳು

ಅಂಕೋಲಾ : ತಮ್ಮ ಪಕ್ಷ ಸೇರಲು ಬಿಜೆಪಿ ನಾಯಕ ಆನಂದ್ ಆಸ್ನೋಟಿಕರ್ ಅನಗತ್ಯ ವಿಳಂಬಿಸುತ್ತಿರುವುದು ಜೆಡಿಎಸ್ ನಾಯಕರ ಸಹನೆ ಪರೀಕ್ಷಿಸಲು ಆರಂಭಿಸಿದೆ.

ತಾವು ಜೆಡಿಎಸ್ ಸೇರುವುದಾಗಿ ಬೆದರಿಸಿ  ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಲು ಆಸ್ನೋಟಿಕರ್ ಯತ್ನಿಸುತ್ತಿದ್ದಾರೆಂದು ಬುಧವಾರ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಜೆಡಿಎಸ್ ರಾಜ್ಯ ಕಾರ್ಯದರ್ಶಿಗಳಾದ ಆನಂದ್ ಗೌಡ, ಮುನಾಫ್ ಮಿರ್ಜಾನ್ಕರ್ ಹಾಗೂ ಜೆ ಎನ್ ನಾಯ್ಕ್ ಆರೋಪಿಸಿದ್ದಾರೆ.

“ಕಾರವಾರದಲ್ಲಿ ನಮಗೆ ಯಾರೂ ನಾಯಕರಿಲ್ಲ. ಪಕ್ಷ ಇಲ್ಲಿ ವಸ್ತುಶಃ ಅಸ್ತಿತ್ವದಲ್ಲಿಲ್ಲ. ಮುಂದಿನ ಚುನಾವಣೆಯಲ್ಲಿ ತಮ್ಮನ್ನು ಕಾರವಾರ ಕ್ಷೇತ್ರದಿಂದ ಕಣಕ್ಕಿಳಿಸಲು ಬಿಜೆಪಿ ನಿರಾಕರಿಸಿದ ನಂತರ ಆಸ್ನೋಟಿಕರ್ ಅವರು ಜೆಡಿಎಸ್ ಸೇರುವ ಇಂಗಿತ ವ್ಯಕ್ತಪಡಿಸಿದಾಗ ನಮ್ಮ ಪಕ್ಷ  ಅದನ್ನು ಸ್ವಾಗತಿಸಿತ್ತು. ಅವರು ನಮ್ಮ ಪಕ್ಷದ ಹೈಕಮಾಂಡ್ ಹಾಗೂ ಮಧು ಬಂಗಾರಪ್ಪ ಜತೆ ಸಂಪರ್ಕದಲ್ಲಿದ್ದಾರೆ. ಆದರೂ ಅವರಿಗೆ ಮಾತ್ರ ತಿಳಿದಿರಬಹುದಾದಂತಹ ಕಾರಣಗಳಿಂದಾಗಿ ಅವರು ಪಕ್ಷ ಸೇರುವುದನ್ನು ಮುಂದೂಡುತ್ತಿದ್ದಾರೆ” ಎಂದು ಜೆಡಿಎಸ್ ನಾಯಕರು ಆರೋಪಿಸಿದ್ದಾರೆ.

ಕಳೆದ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಿ ಸೋತಿದ್ದ ಆಸ್ನೋಟಿಕರ್ ನಂತರ ಕ್ಷೇತ್ರದಿಂದ ದೂರವೇ ಉಳಿದಿದ್ದರು. ಕಾರವಾರದಲ್ಲಿ ಜೆಡಿ (ಎಸ್) ಈ ಹಿಂದಿನ ಚುನಾವಣೆಗಳಲ್ಲಿ 5000ಕ್ಕಿಂತ ಹೆಚ್ಚಿನ ಮತಗಳನ್ನು ಪಡೆದೇ ಇಲ್ಲದಿರುವುದರಿಂದ ಆಸ್ನೋಟಿಕರ್ ಅವರಿಗಾಗಿ ಕಾಯುವುದು ಬಿಟ್ಟು ಅವರಿಗೆ ಬೇರೆ ದಾರಿಯಿಲ್ಲವಾಗಿದೆ.

ತಾವು ಆಸ್ನೋಟಿಕರ್ ಅವರನ್ನು ಬುಧವಾರ ಭೇಟಿಯಾಗಿದ್ದಾಗಿ ಹಾಗೂ ಅವರು ಕ್ಷೇತ್ರದ ವಿವಿಧೆಡೆ ಭೇಟಿಯಾಗುವುದರಲ್ಲಿ ನಿರತರಾಗಿದ್ದಾರೆ ಎಂದು ತಿಳಿಸಿದ ಜೆಡಿಎಸ್ ನಾಯಕರು ಆದಷ್ಟು ಬೇಗ ಮನಸ್ಸು ಮಾಡಿ ಜೆಡಿಎಸ್ ಸೇರುವಂತೆ ಅವರನ್ನು ಕೋರಿದ್ದಾಗಿ ತಿಳಿಸಿದ್ದಾರೆ.

`ಆಸ್ನೋಟಿಕರಗೆ ಬಿಜೆಪಿಗೆ

ಮರು ಪ್ರವೇಶವಿಲ್ಲ”

ಆನಂದ ಆಸ್ನೋಟಿಕರ್ ಅವರಿಗೆ ಬಿಜೆಪಿಗೆ ಮರು ಪ್ರವೇಶ ನೀಡಲಾಗುವುದಿಲ್ಲ ಎಂದು ಪಕ್ಷದ ತಾಲೂಕು ಘಟಕ ಹೇಳಿಕೊಂಡಿದೆ. ಐದು ವರ್ಷಗಳ ಹಿಂದೆ ಆಸ್ನೋಟಿಕರ್ ಸಚಿವರಾಗಿದ್ದಾಗ ಬಿಜೆಪಿಗೆ ಸಾಕಷ್ಟು ಹಾನಿಯುಂಟು ಮಾಡಿದ್ದಾರೆ. ಅವರ ಸತತ ಬಂಡಾಯ ಹಾಗೂ ರಿಸಾರ್ಟ್ ರಾಜಕೀಯದಿಂದಾಗಿಯೇ ಪಕ್ಷ ಕಳೆದ ಚುನಾವಣೆಯಲ್ಲಿ ಸೋಲುಂಡಿತ್ತು ಎಂದು ಕಾರವಾರದಿಂದ ಸ್ಪರ್ಧಿಸಲು ಹಾತೊರೆಯುತ್ತಿರುವ ಬಿಜೆಪಿಯ ಹಲವು ಟಿಕೆಟ್ ಆಕಾಂಕ್ಷಿಗಳು ಹೇಳಿಕೊಂಡಿದ್ದಾರೆ.

 

LEAVE A REPLY