ಬಂಟ್ವಾಳ : ವಿಧಾನಸಭಾ ಟಿಕೆಟ್ ಪಡೆಯಲು ಹಾತೊರೆಯುತ್ತಿರುವ ಜೆಡಿ(ಎಸ್) ನಾಯಕರು

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಚುನಾವಣಾ ವರ್ಷ ಸಮೀಸುತ್ತಿರುವಂತೆ ರಾಜಕೀಯ ಪಕ್ಷಗಳು ಚುನಾವಣಾ ಸಿದ್ಧತೆಯಲ್ಲಿ ಕಾರ್ಯಪ್ರವೃತ್ತವಾಗಿವೆ. ಬಂಟ್ವಾಳದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಸ್ಪರ್ಧೆ ಇದ್ದರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿರುವ ಜೆಡಿ(ಎಸ್) ಕೂಡಾ ಇಲ್ಲಿ ನಿರಂತರ ಸ್ಪರ್ಧೆ ನೀಡುತ್ತಲೇ ಬಂದಿದೆ.

ಮುಂದಿನ ಚುನಾವಣೆಗೆ ಸಿದ್ದತೆಯಲ್ಲಿ ತೊಡಗಿಸಿಕೊಂಡಿರುವ ಬಂಟ್ವಾಳ ಜಾತ್ಯತೀತ ಜನತಾ ದಳ ನಾಯಕರು ಈಗಿನಿಂದಲೇ ಬಂಟ್ವಾಳ ವಿಧಾನಸಭಾ ಟಿಕೆಟ್ ಪಡೆಯಲು ತೆರೆಮರೆಯ ಪೈಪೋಟಿ ಆರಂಭಿಸಿದ್ದಾರೆ. ನಾಯಕರ ಮನವೊಲಿಸಲು ಮುಖಂಡರು ಇನ್ನಿಲ್ಲದ ಕಸರತ್ತು ನಡೆಸುತ್ತಿರುವುದು ಕಂಡುಬರುತ್ತಿದೆ.

ಈಗಾಗಲೇ ನಿರಾಶ್ರಿತರ ಆಶ್ರಯ ತಾಣ ಎಂಬ ವ್ಯಂಗ್ಯಕ್ಕೆ ತುತ್ತಾಗಿರುವ ಬಂಟ್ವಾಳ ಜೆಡಿ(ಎಸ್) ಪಕ್ಷದÀಲ್ಲಿ ಈ ಬಾರಿಯೂ ಅಂತಹದೇ ವಿದ್ಯಾಮಾನಗಳು ಕಂಡು ಬರುತ್ತಿರುವ ಬಗ್ಗೆ ಪಕ್ಷಕ್ಕಾಗಿ ಹಲವು ವರ್ಷಗಳಿಂದ ದುಡಿಯುತ್ತಾ ಬಂದಿರುವ ನಾಯಕರು ಆರೋಪಿಸುತ್ತಿದ್ದಾರೆ.

ಇತ್ತೀಚೆಗೆ ಬಿ ಸಿ ರೋಡಿನಲ್ಲಿ ನಡೆದ ಬಂಟ್ವಾಳ ಜೆಡಿ(ಎಸ್) ಕಾರ್ಯಕರ್ತರ ಸಭೆ ಈ ಆರೋಪವನ್ನು ಸಾಬೀತುಪಡಿಸಿದಂತಿದೆ. ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಯಾವುದೋ ಪಕ್ಷದಿಂದ ವಲಸೆ ಬಂದಿದ್ದ ನಾಗರಾಜ ಶೆಟ್ಟಿ, ಕೆ ಎಂ ಇಬ್ರಾಹಿಂ, ಕೃಷ್ಣಪ್ಪ ಪೂಜಾರಿ, ಇಬ್ರಾಹಿಂ ಕೈಲಾರ್ ಮೊದಲಾದವರಿಗೆ ಮಣೆ ಹಾಕಿ ಕೈ ಸುಟ್ಟುಕೊಂಡಿದ್ದ ಜೆಡಿ(ಎಸ್) ಈ ಬಾರಿಯೂ ಪಾಠ ಕಲಿಯುವ ಲಕ್ಷಣ ಕಂಡು ಬರುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಇತ್ತೀಚೆಗೆ ನಡೆದ ಸಭೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರಾಧ್ಯಕ್ಷರಾಗಿದ್ದ ಹಾರೂನ್ ರಶೀದ್ ಬಂಟ್ವಾಳ, ಜೆಡಿ(ಎಸ್) ಅಲ್ಪಸಂಖ್ಯಾತ ಘಟಕದ ನಾಯಕ ಮುಹಮ್ಮದ್ ಶಫಿ ಸಹಿತ ಪಕ್ಷಕ್ಕಾಗಿ ಮನಃಪೂರ್ವಕವಾಗಿ ದುಡಿದ ಹಲವು ಪ್ರಮುಖ ನಾಯಕರನ್ನು ಕಡೆಗಣಿಸಲಾಗಿತ್ತು. ಸಭೆಯಲ್ಲಿ ಈ ಬಾರಿಯೂ ವಲಸಿಗರು ಹಾಗೂ ಅಸ್ತಿತ್ವಕ್ಕಾಗಿ ಹೆಣಗಾಟ ನಡೆಸುತ್ತಿರುವ ಇಬ್ರಾಹಿಂ ಕೈಲಾರ್, ಪಿ ಎ ರಹಿಂ, ಪ್ರಭಾಕರ ಮೊದಲಾದವರು ವೇದಿಕೆ ಹಂಚಿಕೊಂಡಿದ್ದು ಪಕ್ಷದ ಮೂಲ ಕಾರ್ಯಕರ್ತರ ಕಣ್ಣು ಕೆಂಪಾಗಿಸಿದೆ.

ಜೆಡಿಎಸ್, ಕಾಂಗ್ರೆಸ್, ಸಮಾಜವಾದಿ ಪಕ್ಷ ಬಹುಜನ ಸಮಾಜವಾದಿ ಪಕ್ಷ ಮೊದಲಾದ ಪಕ್ಷಗಳಿಗೆ ಹಾರಾಟ ನಡೆಸಿ ಎಲ್ಲಿಯೂ ಸಲ್ಲದ ಪಿ ಎ ರಹೀಂ ಮತ್ತೆ ಹಳೆಯ ಗಂಡನ ಪಾದವೇ ಗತಿ ಎಂಬಂತೆ ಜೆಡಿಎಸ್ ತೆಕ್ಕೆಗೆ ಬಂದು ಅಸ್ತಿತ್ವಕ್ಕಾಗಿ ಹೆಣಗಾಟ ನಡೆಸುತ್ತಿದ್ದರೆ, ಈ ಹಿಂದೆ ಕೆಜೆಪಿ ಪಕ್ಷದಿಂದ ವಿಧಾನಸಭೆಗೆ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದ ಇಬ್ರಾಹಿಂ ಕೈಲಾರ್ ಬಳಿಕ ಯಾವುದೇ ರಾಜಕೀಯ ಪಕ್ಷಗಳ ಸಹವಾಸವೇ ಬೇಡ ಎಂದು ಕೈ ಕಟ್ಟಿ ಕುಳಿತಿದ್ದರು. ಆದರೆ ಕಳೆದ ಜಿಲ್ಲಾ ಪಂಚಾಯತ್ ಚುನಾವಣೆ ಸಂದರ್ಭ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡು ಸಜಿಪಮುನ್ನೂರು ಕ್ಷೇತ್ರದಿಂದ ಕಾಂಗ್ರೆಸ್ಸಿನ ಪ್ರಕಾಶ್ ಶೆಟ್ಟಿ ವಿರುದ್ದ ಸ್ಪರ್ಧಿಸಿ ಮತ್ತೆ ಮುಖಭಂಗಕ್ಕೀಡಾಗಿ ಕಣದಿಂದ ಪಲಾಯನಗೈದಿದ್ದರು.

ಇದೀಗ ಮತ್ತೆ ಪ್ರತ್ಯಕ್ಷಗೊಂಡು ಶಾಸಕ ಸ್ಥಾನ ಪಡೆಯುವ ಆಸೆಯಿಂದ ಮತ್ತೆ ಜನತಾ ದಳದಲ್ಲಿ ಸಕ್ರಿಯರಾಗಿದ್ದಾರೆ. ಯಾವುದೇ ರಾಜಕೀಯ, ಸಂಘಟನಾ ರಂಗದಲ್ಲಿಲ್ಲದೆ ಹಠಾತ್ ಆಗಿ ಸಾಮಾಜಿಕ ನ್ಯಾಯಪರ ಸಮಿತಿ ಹಾಗೂ ನೇತ್ರಾವತಿ ಹೋರಾಟ ಎಂದೆಲ್ಲಾ ಒಂದೆರಡು ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರಭಾಕರ್ ಎಂಬವರೂ ಕೂಡಾ ಈ ಬಾರಿ ಜನತಾ ದಳದ  ತೆಕ್ಕೆಗೆ ಜಾರಿ ಬಿದ್ದು ಸಕ್ರಿಯರಾಗಿರುವುದು ಬಂಟ್ವಾಳದ ಮೂಲ ಜೆಡಿ(ಎಸ್) ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ ಎಂಬುದು ಕಾರ್ಯಕರ್ತರ ಮಾತುಗಳಿಂದ ತಿಳಿದುಬರುತ್ತಿದೆ.