ಜಯಲಲಿತಾ – ಆ ಕನ್ನಡದ ದಿನಗಳು

ಜಯಲಲಿತಾ 1961ರಿಂದ 1965 ತನಕ ಸುಮಾರು ಆರು ಕನ್ನಡ ಚಿತ್ರಗಳಲ್ಲಿ ರಾಜಕುಮಾರ್, ಉದಯಕುಮಾರ್, ಕಲ್ಯಾಣ್ ಕುಮಾರ್, ಬಾಲಕೃಷ್ಣ ಮತ್ತು ನರಸಿಂಹರಾಜು ಜತೆ ಕಾಣಿಸಿಕೊಂಡಿದ್ದರು.

 ವಿಶೇಷ ಬರಹ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಕನ್ನಡ ಚಿತ್ರರಂಗಕ್ಕೆ ಬಾಲಕಲಾವಿದೆಯಾಗಿ ಪದಾರ್ಪಣೆಗೈದವರು. ಮುಂದೆ ತಮಿಳು ಚಿತ್ರರಂಗದ ಖ್ಯಾತ ನಾಯಕ ನಟಿಯಾಗಿ ಹಾಗೂ ರಾಜಕೀಯ ಪ್ರವೇಶಿಸಿ ಉತ್ತುಂಗವೇರಿದ ಅವರ ಜೀವನಗಾಥೆ ಈಗ ಇತಿಹಾಸ.

ಜಯಲಲಿತಾ ಬಾಲಕಲಾವಿದೆಯಾದ ಕಥೆ  ಸ್ವಾರಸ್ಯಕರ. ಖ್ಯಾತ ನಿರ್ದೇಶಕ ಆರೂರು ಪಟ್ಟಾಭಿ 1961ರಲ್ಲಿ ತಮ್ಮ ಮಹತ್ವಾಕಾಂಕ್ಷೆಯ `ಶ್ರೀಶೈಲ ಮಹಾತ್ಮೆ’ ಚಿತ್ರದ ಶೂಟಿಂಗ್ ಮಾಡುತ್ತಿರುವ ಸಮಯ ಆ ಕಾಲದ ಖ್ಯಾತ ನಟಿಯಾಗಿದ್ದ ಸಂಧ್ಯಾ ಒಮ್ಮೆ ತಮ್ಮ ಪುತ್ರಿ ಜಯಲಲಿತಾರನ್ನು ತಮ್ಮೊಂದಿಗೆ ಸ್ಟುಡಿಯೋಗೆ ಕರೆ ತಂದಿದ್ದರು. ಆ ಮುದ್ದಾದ ಬಾಲಕಿ ಶೂಟಿಂಗ್ ನಡೆಯುತ್ತಿದ್ದುದನ್ನೇ ತದೇಕಚಿತ್ತಳಾಗಿ ಗಮನಿಸುತ್ತಿದ್ದಳು. ಆ ಚಿತ್ರದಲ್ಲಿ ಪಾರ್ವತಿ ದೇವಿಯಾಗಿ ಶಾಲೆ ನಾಟಕದ ನೃತ್ಯ ದೃಶ್ಯವೊಂದರಲ್ಲಿ ಕಾಣಿಸಬೇಕಿದ್ದ ಬಾಲ ಕಲಾವಿದೆಯೊಬ್ಬಳು ಬಂದಿರಲಿಲ್ಲ. ಏನು ಮಾಡುವುದು ಎಂದು ಎಲ್ಲರೂ ಅತ್ತಿತ್ತ ನೋಡಲಾರಂಭಿಸಿದಾಗ ನಿರ್ಮಾಪಕ ನೀರ್ಲಹಳ್ಳಿ ತಳಿಕೆರೆಪ್ಪ ಹಾಗೂ ಪಟ್ಟಾಭಿಯವರಿಗೆ  ಜಯಲಲಿತಾ ಕಂಡರು.  ಅವರ ತಾಯಿಯ ಅನುಮತಿಯೊಂದಿಗೆ ಆಕೆಗೆ ಪಾರ್ವತಿ ವೇಷ ತೊಡಿಸಿ ಆ ನೃತ್ಯದ ದೃಶ್ಯವನ್ನು ಚಿತ್ರೀಕರಿಸಲಾಯಿತು. ಆದರೆ ಆ ಕ್ಷಣ ಅಲ್ಲಿದ್ದ ಯಾರು ಕೂಡ ಈ ಬಾಲಕಿ ಮುಂದೊಂದು ದಿನ ಚಿತ್ರರಂಗ ಹಾಗೂ ರಾಜಕೀಯದಲ್ಲಿ ಇತಿಹಾಸವನ್ನೇ ರಚಿಸಲಿದ್ದಾಳೆಂದು ಕನಸು ಮನಸ್ಸಿನಲ್ಲೂ ಊಹಿಸಿರಲಿಲ್ಲ.

ಜಯಲಲಿತಾ 1961ರಿಂದ 1965 ತನಕ ಸುಮಾರು ಆರು ಕನ್ನಡ ಚಿತ್ರಗಳಲ್ಲಿ ರಾಜಕುಮಾರ್, ಉದಯಕುಮಾರ್, ಕಲ್ಯಾಣ್ ಕುಮಾರ್, ಬಾಲಕೃಷ್ಣ ಮತ್ತು ನರಸಿಂಹರಾಜು ಜತೆ ಕಾಣಿಸಿಕೊಂಡಿದ್ದರು. ಆಕೆಯ ಪ್ರಥಮ ಕನ್ನಡ ಚಿತ್ರ `ಶ್ರೀ ಶೈಲ ಮಹಾತ್ಮೆ’ಯಲ್ಲಿ (1964) ರಾಜಕುಮಾರ್ ಮತ್ತು ಬಾಲಕೃಷ್ಣ ಪ್ರಮುಖ ತಾರಾಗಣದಲ್ಲಿದ್ದರೆ, `ಚಿನ್ನದ ಗೊಂಬೆ’ ಆಕೆ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡ ಪ್ರಥಮ ಚಿತ್ರವಾಗಿತ್ತು. ಈ ಚಿತ್ರದಲ್ಲಿ ಆಕೆಯ ತಾಯಿ, ಕಲ್ಪನಾ ಹಾಗೂ ಎಂ ವಿ ರಾಜಮ್ಮ ಕೂಡ ನಟಿಸಿದ್ದರು. ಮುಂದೆ ಆಕೆ 1965ರಲ್ಲಿ `ಮಾವನ ಮಗಳು’ (ಕಲ್ಯಾಣ್ ಕುಮಾರ್ ಹಾಗೂ ಅಶ್ವಥ್ ಜತೆ), `ಮನೆ ಅಳಿಯ’ (ಕಲ್ಯಾಣ್ ಕುಮಾರ್, ನರಸಿಂಹರಾಜು ಜತೆ), `ನನ್ನ ಕರ್ತವ್ಯ’ ಮತ್ತು `ಬದುಕುವ ದಾರಿ’ (ಕಲ್ಯಾಣ್ ಕುಮಾರ್ ಹಾಗೂ ಆರ್ ನಾಗೇಂದ್ರ ಜತೆ) ನಟಿಸಿದ್ದರು.

ಹಿರಿಯ ಛಾಯಾಗ್ರಾಹಕ  ಚಿಕ್ಕಬಳ್ಳಾಪುರದ  ಲಕ್ಷ್ಮೀನಾರಾಯಣ ಅವರು `ಮಾವನ ಮಗಳು’ ಚಿತ್ರದ ಚಿತ್ರೀಕರಣದ ಸಂದರ್ಭ ಜಯಲಲಿತಾ ಅವರ ಕೆಲವು ಛಾಯಾಚಿತ್ರಗಳನ್ನು ತಾವು ತೆಗೆದಿರುವ ಬಗ್ಗೆ ನೆನಪಿಸುತ್ತಾರೆ. ಫೋಟೋ ಶೂಟ್ ವೇಳೆ ಜಯಲಲಿತಾ ವಿನಮ್ರರಾಗಿ ಸಹಕರಿಸಿದ್ದರು ಎಂದೂ 83 ವರ್ಷದ ಲಕ್ಷ್ಮೀನಾರಾಯಣ ಹೇಳುತ್ತಾರೆ.

ತಮ್ಮ ಪುತ್ರಿ ಚಿತ್ರರಂಗದಲ್ಲಿ ಮುಂದೆ ಬರಲು ಸಹಕರಿಸುವಂತೆ ಸಂಧ್ಯಾ ಮದ್ರಾಸಿನಿಂದ ತಮಗೆ ಪತ್ರ ಬರೆಯುತ್ತಿದ್ದರು ಹಾಗೂ ತಮ್ಮ ಪುತ್ರಿಯ ಫೋಟೋಗಳನ್ನೂ ಕ್ಲಿಕ್ಕಿಸುವಂತೆ ಹೇಳುತ್ತಿದ್ದರು ಎಂದು ಲಕ್ಷ್ಮೀನಾರಾಯಣ್ ವಿವರಿಸಿದರು. “ತಾವು ತೆಗೆದ ಭಾವಚಿತ್ರಗಳ ಬಗ್ಗೆ ಜಯಲಲಿತಾ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದರು. ಅವರಿಗೆ ಕನ್ನಡ ಬರುತ್ತಿತ್ತಾದರೂ ಅಷ್ಟೊಂದು ನಿರರ್ಗಳವಾಗಿ ಮಾತನಾಡುತ್ತಿರಲಿಲ್ಲ” ಎಂದು ಅವರು ಹೇಳಿದ್ದಾರೆ.

ಆದರೆ ಜಯಲಲಿತಾ ಅವರು ಮುಖ್ಯಮಂತ್ರಿಯಾದ ನಂತರ ಅವರನ್ನು ಭೇಟಿ ಮಾಡುವ ಲಕ್ಷ್ಮೀನಾರಾಯಣ ಅವರ ಪ್ರಯತ್ನಗಳು ಸಫಲವಾಗಿರಲಿಲ್ಲ. ಪ್ರತಿ ಬಾರಿ ಅವರ ನಿವಾಸಕ್ಕೆ ಹೋದಾಗಲೂ ಅವರು ಎಲ್ಲಿಯಾದರೂ ಹೊರಗೆ ಹೋಗಿರುತ್ತಿದ್ದರು ಎಂದು ಮನೆಯ ಮಂದಿ ಹೇಳುತ್ತಿದ್ದರು. ಜಯಲಲಿತಾ ಮತ್ತವರ ತಾಯಿ ಸಂಧ್ಯಾ ತಮಗೆ ಬರೆದಿರುವ ಎರಡು ಪತ್ರಗಳನ್ನು ಅವರು ಈಗಲೂ ಜತನದಿಂದ ಕಾಪಾಡಿಕೊಂಡಿದ್ದಾರೆ.

ಜಯಲಲಿತಾ ವ್ಯಕ್ತಿತ್ವ ಅವರು ಕಂಡಂತೆ  ಹೇಗಿತ್ತು ಎಂಬ ಪ್ರಶ್ನೆಗೆ. “ಆಕೆ ಬುದ್ಧಿವಂತೆಯಾಗಿದ್ದರು ಹಾಗೂ ಹೆಚ್ಚಾಗಿ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಆಕೆ ಶೂಟಿಂಗ್ ಸ್ಥಳಗಳಿಗೆ ಇಂಗ್ಲಿಷ್ ಪುಸ್ತಕಗಳನ್ನೂ ತರುತ್ತಿದ್ದುದರಿಂದ ಆಕೆಗೆ ಓದುವುದೆಂದರೆ ಇಷ್ಟ ಎಂದೆನಿಸುತ್ತಿತ್ತು. ಭರತನಾಟ್ಯಂ ನರ್ತಕಿಯಾಗಿದ್ದ ಜಯಲಲಿತಾಗೆ ಫೋಟೋಜೆನಿಕ್ ಮುಖವಿತ್ತು. ಆಕೆ ಮೇಕ್-ಅಪ್ ಇಲ್ಲದೆ ಯಾವತ್ತೂ ಚಿತ್ರಗಳಿಗೆ  ಪೋಸ್ ನೀಡುತ್ತಿರಲಿಲ್ಲ. ಆಕೆ ಸೌಂದರ್ಯ ಪ್ರಜ್ಞೆ ಹೊಂದಿದವರಾಗಿದ್ದರು” ಎಂದು ಲಕ್ಷ್ಮೀನಾರಾಯಣ ವಿವರಿಸಿದ್ದಾರೆ.

ಜಯಲಲಿತಾ ಅವರು ಸುಮಾರು 14ಕ್ಕೂ ಹೆಚ್ಚು ಚಿತ್ರಗಳಿಗೆ ಹಾಡಿದ್ದಾರೆ. ಚಿತ್ರರಂಗ ತ್ಯಜಸಿದ ನಂತರವೂ ಅವರು ಅದನ್ನು ಮರೆಯಲಿಲ್ಲ. ಪಿ ಬಿ ಶ್ರೀನಿವಾಸ್ ಅವರನ್ನು  ತಮಿಳು ಮತ್ತು ಸಂಸ್ಕøತಿ ಇಲಾಖೆ ಕಾರ್ಯದರ್ಶಿಯನ್ನಾಗಿಸಿದ್ದರು ಎಂದು ಎನ್ ಎಸ್ ಶ್ರೀಧರ ಮೂರ್ತಿ ನೆನಪಿಸಿಕೊಂಡಿದ್ದಾರೆ.

ಖ್ಯಾತ ಕನ್ನಡ ಚಿತ್ರ ನಿರ್ಮಾಪಕ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಅವರು ಕೂಡ ಜಯಲಲಿತಾ ಅವರೊಂದಿಗಿನ ತಮ್ಮ ಒಡನಾಟವನ್ನು ಮೆಲುಕು ಹಾಕಿದ್ದಾರೆ. “ಜಯಲಲಿತಾ ಅವರ ವಿದ್ಯಾರ್ಥಿ ದಿನಗಳಲ್ಲಿ ನಾನು ಅವರನ್ನು ಕಂಡಿಲ್ಲವಾದರೂ ಅವರು ಪ್ರಕಾಶ್ ರಾವ್ ನಿರ್ದೇಶನದ ಚಿತ್ರವೊಂದರ ಶೂಟಿಂಗಿನಲ್ಲಿ ಭಾಗವಹಿಸುತ್ತಿದ್ದ ಸಮಯ ಅವರಿದ್ದ ಮೆಟ್ರೊಪೋಲ್ ಹೋಟೆಲಿನಿಂದ ಅವರನ್ನು ನನ್ನ ತಂದೆಯ ಅಣತಿಯಂತೆ ಶೂಟಿಂಗ್ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿದ್ದೆ. ನಾವು ಜತೆಯಾಗಿ ಪ್ರಯಾಣಿಸುತ್ತಿದ್ದಾಗ ಜಯಲಲಿತಾ ಅವರು ದಕ್ಷಿಣದ ಚಲನಚಿತ್ರರಂಗದ ಹಲವು ವಿಚಾರಗಳ ಬಗ್ಗೆ ನನ್ನೊಂದಿಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಿದ್ದರು” ಎಂದು  ಸಿಂಗ್ ಹೇಳುತ್ತಾರೆ. (ಕೃಪೆ : ದಿ ಹಿಂದೂ)