ತಮಿಳರ ಕಣ್ಮಣಿ ಜಯಾ ನಿಧನ

ಚೆನ್ನೈ : ಕಳೆದ 75 ದಿನಗಳಿಂದ ಇಲ್ಲಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡು ಸೀಎಂ ಜೆ ಜಯಾಲಲಿತಾ ನಿನ್ನೆ ಮಧ್ಯರಾತ್ರಿ ಕೊನೆಯುಸಿರೆಳೆದರು.

ಚಲನಚಿತ್ರ ತಾರೆಯಾಗಿ ವೃತ್ತಿ ಜೀವನ ಆರಂಭಿಸಿದ್ದ ಜಯಾ `ಅಮ್ಮ’, ರಾಜಕೀಯ ರಂಗದಲ್ಲಿ ಮೂರು ದಶಕಕ್ಕೂ ಹೆಚ್ಚು ಕಾಲ ಸಾರ್ವಜನಿಕ ಜೀವನ ನಡೆಸಿದ್ದಾರೆ.

68 ವರ್ಷದ ಜಯಾ ಸೆಪ್ಟೆಂಬರ್ 22ರಂದು ಜ್ವರ ಮತ್ತು ಡಿಹೈಡ್ರೆಶನ್ ಕಾಯಿಲೆ ನಿಮಿತ್ತ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರು ಹೃದಯ, ಶ್ವಾಸಕೋಶ ಸಂಬಂಧಿ ರೋಗಕ್ಕೂ ತುತ್ತಾಗಿದ್ದರು.

ಜಯಾ ಸಾವಿಗೆ ಮುಂಚೆ, ಟೀವಿಯಲ್ಲಿ ಸುದ್ದಿ ಪ್ರಕಟ !

ಅಚ್ಚರಿಯೆಂದರೆ, ಜಯಾ ಮಾಲಕತ್ವದ ಜಯಾ ಟೀವಿ ನಿನ್ನೆ ಸಂಜೆ ತಮಿಳುನಾಡು ಸೀಎಂ ಕೊನೆಯುಸಿರೆಳೆಯುವ ಮುಂಚೆಯೇ `ಜಯಾಲಲಿತಾ ಇನ್ನಿಲ್ಲ’ ಎಂಬ ಸುದ್ದಿ ಬಿತ್ತರಿಸಿ ಭಾರೀ ಕೋಲಾಹಲ ಸೃಷ್ಟಿಸಿತ್ತು.

ನಿನ್ನೆ ಸಂಜೆಯಿಂದಲೇ ಪರಿಸ್ಥಿತಿ ನಿಯಂತ್ರಿಸುವ ನಿಟ್ಟಿನಲ್ಲಿ ಜಯಾ ದಾಖಲಾಗಿರುವ ಆಸ್ಪತ್ರೆ ಮತ್ತು ಜಯಾರ ಬಂಗಲೆಯ ಆಸುಪಾಸಿನ ಸುತ್ತ ಸಾವಿರಾರು ಪೊಲೀಸ್ ಸಿಬ್ಬಂದಿ ನಿಯುಕ್ತಿಗೊಳಿಸಲಾಗಿತ್ತು.

ಜಯಾ ಸತ್ತ ಸುದ್ದಿ ಪ್ರಕಟಗೊಳ್ಳುತ್ತಲೇ ಸಾವಿರಾರು ಎಐಎಡಿಎಂಕೆ ಕಾರ್ಯಕರ್ತರರು ಮತ್ತು ಜನಸಾಮಾನ್ಯರು ಕಣ್ಣೀರುಗರೆದರು. ಕೆಲವು ದಿನಗಳಿಂದ ಜಯಾರಿಗೆ ಅಮೆರಿಕ, ಸಿಂಗಾಪುರ ಮತ್ತು ಏಮ್ಸ್‍ನ ಪ್ರಸಿದ್ಧ ವೈದ್ಯರು ಐಸಿಯುವಿನಲ್ಲಿ ಚಿಕಿತ್ಸೆ ನಡೆಸಿದ್ದಾರೆ. ಜಯಾ ಸಾವಿಗೆ ಮುಂಚೆಯೇ ಅವರ ಸಾವು ಸುದ್ದಿ ಪ್ರಕಟಿಸಿದ್ದ ಜಯಾ ಟೀವಿ ತಕ್ಷಣ ತನ್ನ ತಪ್ಪಿಗೆ ಕ್ಷಮೆ ಯಾಚಿಸಿತ್ತು.

 

ವಾಹನ ಪುಡಿಗೈದ ಜಯಾ ಅಭಿಮಾನಿಗಳು

ಚೆನ್ನೈ : ತಮಿಳುನಾಡು ಸೀಎಂ ಜಯಾಲಲಿತಾ ಚಿಕಿತ್ಸೆ ಪಡೆಯುತ್ತಿದ್ದ ಅಪೋಲೋ ಆಸ್ಪತ್ರೆ ಹೊರಗಡೆ ಅಮ್ಮಾಳ ಕಟ್ಟಾ ಅಭಿಮಾನಿಗಳು ಭಾರೀ ರೋದಿಸುತ್ತಿದ್ದ ದೃಶ್ಯಗಳು ಕಂಡುಬಂದಿವೆ. ಹತಾಶಗೊಂಡ ಕೆಲವರು ಸ್ಥಳದಲ್ಲಿದ್ದ ವಾಹನಗಳನ್ನು ಪುಡಿಗೈಯಲೂ ಹಿಂದೇಟು ಹಾಕಿಲ್ಲ.

ಜಯಾಗೆ ಹೃದಯಾಘಾತವಾಗಿದೆ ಎಂಬ ಸುದ್ದಿ ಪ್ರಸಾರಗೊಳ್ಳುತ್ತಲೇ, ಸಾವಿರಾರು ಅಭಿಮಾನಿಗಳು ಆಸ್ಪತ್ರೆಯತ್ತ ಧಾವಿಸಿ ಬಂದು, ಅಮ್ಮಾರಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಅವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂಬ ಸುದ್ದಿಯಿಂದ ಬಿಗಡಾಯಿಸಿದ ಜನರು, ಆಸ್ಪತ್ರೆಯೊಳಗೆ ನುಗ್ಗಿ ದಾಂದಲೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಲಾಠಿ ಚಾರ್ಜ್ ಮಾಡಿ, ಪರಿಸ್ಥಿತಿ ನಿಯಂತ್ರಿಸಿದ್ದು, ಕೆಲವಾರು ವಾಹನಗಳು ಪುಡಿಗೈಯಲ್ಪಟ್ಟಿವೆ.