ನೃತ್ಯ ಮಾಡಿ ಶಾಲೆಗೆ ನೆರವಾಗಿದ್ದ ಜಯಲಲಿತಾ

ಮೊನ್ನೆ ಇಹಲೋಕ ತ್ಯಜಿಸಿದ ಜಯಲಲಿತಾ ಬಹುಮುಖ ಪ್ರತಿಭೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಆಕೆ ಎಷ್ಟು ಖಡಕ್ಕೋ ಅಷ್ಟೇ ಉದಾರಿಯೂ ಆಗಿದ್ದರು. ಅದಕ್ಕೊಂದು ಚಿಕ್ಕ ನಿದರ್ಶನ ಇಲ್ಲಿದೆ.
ಮಂಡ್ಯ ಜಿಲ್ಲೆಯ ನಗುವಿನಹಳ್ಳಿ ತಾಲೂಕಿನ ಬೋರ್ಡ್ ಹೈಸ್ಕೂಲಿನ ಮಕ್ಕಳು ಸರಿಯಾದ ಕಟ್ಟಡವಿಲ್ಲದೇ ಬಹಳ ಕಷ್ಟ ಅನುಭವಿಸುತ್ತಿದ್ದರು. ಕಟ್ಟಡ ನಿರ್ಮಿಸಲು ಗ್ರಾಮದ ಮುಖಂಡರು ಮುಂದಾದಾಗ ಆರ್ಥಿಕ ಬಿಕ್ಕಟ್ಟು ಎದುರಾಗಿತ್ತು. ಆಗ ಅದೇ ಜಿಲ್ಲೆಯವರಾದ, ನಟಿ ಜಯಲಲಿತಾ ಅವರಿಂದ ನೃತ್ಯ ಪ್ರದರ್ಶನ ಮಾಡಿಸಿ, ಹಣ ಸಂಗ್ರಹಿಸಲು ಗ್ರಾಮದ ಮುಖಂಡರು ನಿರ್ಧರಿಸಿದರು. ಇದಕ್ಕೆ ಜಯಲಲಿತಾ ಕೂಡ ಮನಃಪೂರ್ವಕವಾಗಿ ಒಪ್ಪಿಕೊಂಡರು. ಶಾಲೆ ಕಟ್ಟಡ ನಿರ್ಮಾಣದ ಸಹಾಯಾರ್ಥವಾಗಿ ಆಗ ಸಿನಿಮಾ ತಾರೆಯಾಗಿದ್ದ ಜಯಲಲಿತಾ ನೃತ್ಯ ಪ್ರದರ್ಶನ ನೀಡಿದ್ದರು. ಜಯಲಲಿತಾರ ನೃತ್ಯ ಪ್ರದರ್ಶನಕ್ಕೆ ರೂ.50, 25, 10 ಪ್ರವೇಶ ಧನ ನಿಗದಿ ಪಡಿಸಲಾಗಿತ್ತು. ಜಯಲಲಿತಾರ ನೃತ್ಯ ನೋಡಲು ಜನಸಾಗರವೇ ಹರಿದು ಬಂದಿದ್ದರಿಂದ 48 ಸಾವಿರ ರೂಪಾಯಿ ಸಂಗ್ರಹವಾಗಿತ್ತು. ಜಯಲಲಿತಾ ಒಂದು ರೂಪಾಯಿಯನ್ನೂ ಸಂಭಾವನೆ ಪಡೆಯದೇ ಮಕ್ಕಳ ಶಿಕ್ಷಣಕ್ಕಾಗಿ ಶಾಲೆ ಕಟ್ಟಲು ಸಂಪೂರ್ಣ ಹಣವನ್ನು ಬಳಸಿಕೊಳ್ಳುವಂತೆ ಹೇಳಿ ಉದಾರತೆ ಮೆರೆದಿದ್ದರಂತೆ. ಈ ವಿಷಯವನ್ನು ಈಗಲೂ ಅಲ್ಲಿಯ ಜನತೆ ನೆನಪಿಸಿಕೊಂಡು `ಅಮ್ಮ’ನ ನಿಧನಕ್ಕೆ ಕಣ್ಣೀರುಗರೆಯುತ್ತಾರೆ.