ಅತ್ತೆ ಹೆಸರಿನಲ್ಲೂ ಆಸ್ತಿ ಖರೀದಿಸಿದ್ದ ಜಯಚಂದ್ರ

ಬೆಂಗಳೂರು : ಸೇವೆಯಿಂದ ವಜಾಗೊಂಡಿರುವ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಮುಖ್ಯ ಯೋಜನಾಧಿಕಾರಿ ಎಸ್ ಸಿ ಜಯಚಂದ್ರ ಅವರಿಗೆ ಸಂಬಂಧ ಪಟ್ಟ ಇನ್ನೂ ಹಲವಾರು ಆಸ್ತಿಗಳ ಬಗ್ಗೆ ಮಾಹಿತಿಗಳು ಹೊರಬಿದ್ದಿದ್ದು ಅವರು ತಮ್ಮ ಅತ್ತೆಯ ಹೆಸರಿನಲ್ಲೂ ಆಸ್ತಿ ಖರೀದಿಸಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ.

ಇವುಗಳಲ್ಲಿ  15  ಎಕರೆ ಹಾಗೂ 10 ಗುಂಟದ ಸೈಟೊಂದು ಮೈಸೂರು ಜಿಲ್ಲೆಯ ಕಬಿನಿ ಪಕ್ಕದ ಅಂತರಸಂತೆಯಲ್ಲಿ ಖರೀದಿಸಲಾಗಿದ್ದರೆ, ನಾಲ್ಕು ಇತರ  ಸೈಟುಗಳು ನಗರದ ಯಲಹಂಕದ ಬಳಿಯ ಹರೊಹಳ್ಳಿಯಲ್ಲಿ ಖರೀದಿಸಲಾಗಿದೆ. ಮೂಲಗಳ ಪ್ರಕಾರ ಜಯಚಂದ್ರ ಅವರ ಅತ್ತೆಯ ಹೆಸರಿನಲ್ಲಿ ಹಲವು ಆಸ್ತಿಯಿದ್ದು ಈ ಆಸ್ತಿ ಖರೀದಿಸಲು ಹಣವೆಲ್ಲಿಂದ ಬಂತು ಎಂಬುದರ ಬಗ್ಗೆ ತಿಳಿಯುವ ಪ್ರಯತ್ನ ಮುಂದುವರಿದಿದೆ.

ಕಬಿನಿ ಸಮೀಪದ ಅಂತರಸಂತೆಯಲ್ಲಿ 2012ರಲ್ಲಿ ಭೂಮಿ ಖರೀದಿಸಲಾಗಿತ್ತು ಹಾಗೂ ಈ ಭೂಮಿಯು ಕಬಿನಿ ಜಲಾಶಯ ಪುರ್ನವಸತಿ ಯೋಜನೆಗಾಗಿ ಮೀಸಲಿಟ್ಟಿರುವ ಭೂಮಿಯ ಪಕ್ಕದಲ್ಲಿಯೇ ಇದೆ. ಜಯಚಂದ್ರ ಅವರು ಇಲ್ಲಿ ರಿಸಾರ್ಟ್ ಒಂದನ್ನು ನಿರ್ಮಿಸುವ ಯೋಚನೆಯಲ್ಲಿದ್ದರು ಎನ್ನಲಾಗಿದೆ.

ಅವರ ಅತ್ತೆ  2007ರಲ್ಲಿ 9 ಗುಂಟದಿಂದ 11 ಗುಂಟ  ವಿಸ್ತೀರ್ಣದ ನಾಲ್ಕು ಸೈಟುಗಳನ್ನು ಖರೀದಿಸಿದ್ದರೂ ಇವುಗಳಲ್ಲಿ ಎರಡು ಸೈಟನ್ನು ಒಂದೇ ವರ್ಷದೊಳಗಾಗಿ ಮಾರಾಟ ಮಾಡಲಾಗಿತ್ತೆಂದು ತಿಳಿದುಬಂದಿದೆ.