ಜಯಚಂದ್ರಗೆ ಜಾಮೀನು ನೀಡಿದ ಹೈ ಕೋರ್ಟ್

ಬೆಂಗಳೂರು : ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ಬಂಧಿಸಿರುವ  ರಾಜ್ಯ ಹೆದ್ದಾರಿ ಅಭಿವೃದ್ಧಿ ಇಲಾಖೆಯ ಅಮಾನತುಗೊಂಡಿರುವ ಮುಖ್ಯ ಯೋಜನಾಧಿಕಾರಿ  ಎಸ್ ಸಿ ಜಯಚಂದ್ರಗೆ ಫೆಬ್ರವರಿ 2 ತಾರೀಕಿಗೆ ಅನ್ವಯವಾಗುವಂತೆ ಹೈಕೋರ್ಟ್  ಜಾಮೀನು ನೀಡಿದೆ.

ಕಾನೂನಿನನ್ವಯ 15 ದಿನಗಳ ಪೊಲೀಸ್ ಕಸ್ಟಡಿ ಪಡೆಯಬಹುದಾದರೂ ಆರೋಪಿಯನ್ನು ಸಿಬಿಐ ಕೇವಲ ಐದು ದಿನಗಳ ಕಾಲ ತನ್ನ ಕಸ್ಟಡಿಗೆ ಇಲ್ಲಿಯ ತನಕ ಪಡೆದುಕೊಂಡಿರುವುದರಿಂದ ಹೆಚ್ಚಿನ ವಿಚಾರಣೆಗಾಗಿ ಇನ್ನೂ ಕೆಲ ದಿನಗಳ ಕಾಲ ಅವರನ್ನು ಕಸ್ಟಡಿಗೆ ಪಡೆಯಬೇಕಾಗಬಹುದು ಎಂದು ಸಿಬಿಐ ಪರ ವಕೀಲ  ನ್ಯಾಯಾಲಯಕ್ಕೆ ತಿಳಿಸಿದ ಹಿನ್ನೆಲೆಯಲ್ಲಿ ಜಸ್ಟಿಸ್ ರತ್ನಕಲಾ ಅವರು ಮುಂದಿನ ತಾರೀಕಿಗೆ ಅನ್ವಯವಾಗುವಂತೆ ಜಾಮೀನು ಆದೇಶ ಹೊರಡಿಸಿದ್ದಾರೆ.

ಜಯಚಂದ್ರ ಮನೆ ಮೇಲೆ ಇತ್ತೀಚೆಗೆ ಸಿಬಿಐ ಹಾಗೂ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾಗ ಕೋಟಿಗಟ್ಟಲೆ ಹೊಸ ನೋಟು, ಚಿನ್ನದ ಗಟ್ಟಿ ಹಾಗೂ ಕೋಟ್ಯಂತರ ಮೌಲ್ಯದ ಆಸ್ತಿ ಪತ್ತೆಯಾಗಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.